ಕುಂದಾಪುರ : ಸುದ್ದಿ ಪ್ರಕಟಿಸಿದ ವರದಿಗಾರನ ವಿರುದ್ಧ ದ್ವೇಷ ಸಾಧಿಸಿ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಸಾರ್ವಜನಿಕವಾಗಿ ಪತ್ರಕರ್ತನ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.


‘ಕನ್ನಡ ಪ್ರಭ’ ಪತ್ರಿಕೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಹಲ್ಲೆಗೊಳಗಾದ ಪತ್ರಕರ್ತರಾಗಿದ್ದು, ಹಲ್ಲೆ ನಡೆಸಿದ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ವೈದ್ಯರು ಬಡ ರೋಗಿಗಳಿಂದ ಚಿಕಿತ್ಸೆಯ ವೇಳೆ ಹಣ ಪಡೆಯುತ್ತಿರುವ ಬಗ್ಗೆ ಶ್ರೀಕಾಂತ್ ಹೆಮ್ಮಾಡಿ ಅವರು ತಮ್ಮ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರು. ಈ ವರದಿಯಿಂದ ದ್ವೇಷಗೊಂಡಿದ್ದ ಡಾ. ಮಹೇಂದ್ರ ಕುಮಾರ್ ಶೆಟ್ಟಿ, ಆಗಸ್ಟ್ 21ರಂದು ಬೆಳಿಗ್ಗೆ ಕುಂದಾಪುರದ ಹೊಟೇಲ್ ಒಂದರಲ್ಲಿ ಶ್ರೀಕಾಂತ್ ಹೆಮ್ಮಾಡಿ ಅವರು ಉಪಹಾರ ಸೇವಿಸುತ್ತಿದ್ದಾಗ ಏಕಾಏಕಿ ದಾಳಿ ನಡೆಸಿ, ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ.

ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ, ಕಾರ್ಕಳ ತಾಲೂಕು ಘಟಕಗಳು ತೀವ್ರವಾಗಿ ಖಂಡಿಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



