ಕಾಸರಗೋಡು: ನಿಯಂತ್ರಣ ತಪ್ಪಿದ ಬೋರ್‌ವೆಲ್ ಲಾರಿಯೊಂದು ರಸ್ತೆ ಬದಿಯ ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ, ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ವೆಸ್ಟ್ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ.


ಮಧ್ಯಪ್ರದೇಶ ಮೂಲದ ದೇವೇಂದ್ರನ್ ಹಾಗೂ ಛತ್ತೀಸ್‌ಗಢ ಮೂಲದ ಮನಾಸಿರ್ ಮೃತಪಟ್ಟ ದುರದೃಷ್ಟಕರ ಕಾರ್ಮಿಕರು. ಇವರಿಬ್ಬರೂ ಬೋರ್‌ವೆಲ್ ಲಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬೋರ್‌ವೆಲ್ ಕೆಲಸ ಮುಗಿಸಿಕೊಂಡು ಹಿಂತಿರುಗುತ್ತಿದ್ದ ಲಾರಿಯು ವರಕ್ಕಾಡ್ ಜಂಕ್ಷನ್‌ನ ಕಡಿದಾದ ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದಾಗ ಹಠಾತ್ ನಿಯಂತ್ರಣ ತಪ್ಪಿದೆ. ಚಾಲಕನ ಹತೋಟಿ ತಪ್ಪಿದ ಭಾರಿ ಗಾತ್ರದ ಲಾರಿಯು ರಸ್ತೆ ಪಕ್ಕದಲ್ಲೇ ಇದ್ದ ಜೇಸನ್ ಎಂಬುವರ ಮನೆಯ ಮೇಲೆ ಸೀದಾ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಕಾರ್ಮಿಕರಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ರಭಸಕ್ಕೆ ಮನೆಯ ಮೇಲ್ಛಾವಣಿಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆದರೆ, ಲಾರಿಯ ಭಾರೀ ಗಾತ್ರದ ಕ್ರೇನ್ ಭಾಗವು ಟೆರೇಸ್‌ನ ಬದಿಗೆ ಸಿಲುಕಿಕೊಂಡಿದ್ದರಿಂದ ಮನೆಗೆ ಆಗಬಹುದಾಗಿದ್ದ ದೊಡ್ಡ ಮಟ್ಟದ ಹಾನಿ ತಪ್ಪಿದೆ. ಅಪಘಾತ ಸಂಭವಿಸಿದ ವೇಳೆ ಮನೆಯಲ್ಲಿದ್ದ ಜೇಸನ್ ಹಾಗೂ ಅವರ ಕುಟುಂಬದ ಸದಸ್ಯರು ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಜೆಸಿಬಿ/ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

