ಅಬುಧಾಬಿ : ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ ಭಾರತೀಯ ಮೂಲದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಭೀಕರ ದಾಳಿ ನಡೆಸಿ, ವಿಮಾನವನ್ನು ಹೈಜಾಕ್ ಹಾಗೂ ಧ್ವಂಸಗೊಳಿಸಲು ಯತ್ನಿಸಿದ ಸಹ-ಪೈಲಟ್‌ನ ಗುರುತು ಕೊನೆಗೂ ಬಹಿರಂಗಗೊಂಡಿದೆ.


ದಾಳಿಕೋರ ಸಹ-ಪೈಲಟ್‌ನನ್ನು ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದ್ದು, ಈತ ಉಗ್ರಗಾಮಿ ಹಾಗೂ ಆಮೂಲಾಗ್ರ ‘ಇಸ್ಲಾಮಿಸ್ಟ್ ಮೂಲಭೂತವಾದಿ’ ವಿಚಾರಧಾರೆಗೆ ಒಳಗಾಗಿದ್ದ ಎಂದು ಅಮೆರಿಕ ಮತ್ತು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಒಮಾನ್ ತಂದೆ ಮತ್ತು ಸಿರಿಯಾ ಮೂಲದ ತಾಯಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಜನಿಸಿದ ಈತ, ತನ್ನ ಬಾಲ್ಯ ಹಾಗೂ ಜೀವನದ ಹಲವು ವರ್ಷಗಳನ್ನು ಯುಎಇನಲ್ಲೇ ಕಳೆದಿದ್ದ.
ಈ ಹಿಂದೆ ಒಮಾನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ‘ಒಮಾನ್ ಏರ್’ನಲ್ಲಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಈತನನ್ನು Radical Ideology ಹೊಂದಿರುವ ಆತಂಕದ ಹಿನ್ನೆಲೆಯಲ್ಲಿ 2025ರ ಫೆಬ್ರವರಿಯಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು. ನಂತರ ಕೆಲ ಕಾಲ ‘ರಾಯಲ್ ಏರ್ ಮರೋಕ್’ನಲ್ಲಿ ಕೆಲಸ ಮಾಡಿದ್ದ ಅಲ್-ಹಮ್ಮಾಮಿ, ಕಳೆದ 8 ತಿಂಗಳುಗಳಿಂದ ಫ್ಲೈದುಬೈ ಸಂಸ್ಥೆಯಲ್ಲಿ ಸಹ-ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಇಸ್ರೇಲ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಈತ ಇಂಗ್ಲೆಂಡ್‌ನ ‘ಬಕಿಂಗ್‌ಹ್ಯಾಮ್‌ಶೈರ್ ನ್ಯೂ ಯುನಿವರ್ಸಿಟಿ’ಯಲ್ಲಿ ವ್ಯಾಸಂಗ ಮಾಡಿದ್ದ.
ಘಟನೆ ನಡೆದ ಸುಮಾರು 9 ಗಂಟೆಗಳ ಬಳಿಕ, ಅಲ್-ಹಮ್ಮಾಮಿ ಹೆಸರಿನ ಲಿಂಕ್ಡ್‌ಇನ್ (LinkedIn) ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಆತಂಕಕಾರಿ ವೀಡಿಯೊ ಹಾಗೂ ಫೋಟೊಗಳು ಪ್ರಕಟಗೊಂಡು ತಕ್ಷಣವೇ ಡಿಲೀಟ್ ಆಗಿವೆ.

ವೀಡಿಯೊ ತುಣುಕಿನಲ್ಲಿ ಬೋಯಿಂಗ್ 737 MAX ವಿಮಾನದ ಕಾಕ್‌ಪಿಟ್ ಒಳಗಿನಿಂದ ಇಸ್ರೇಲಿ ವಿಮಾನಯಾನ ಸಂಸ್ಥೆಗಳಾದ ‘ಎಲ್ ಅಲ್’ (El Al) ಮತ್ತು ‘ಆರ್ಕಿಯಾ’ ಸಂಸ್ಥೆಗಳ ವಿಮಾನಗಳನ್ನು ಜೂಮ್ ಮಾಡಿ ತೋರಿಸಲಾಗಿತ್ತು. ವೀಡಿಯೊದ ಕೊನೆಯಲ್ಲಿ ಅಲ್-ಖೈದಾ ಮಾಜಿ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹಾಗೂ 2009ರಲ್ಲಿ CIA ಅಧಿಕಾರಿಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಅಲ್-ಖೈದಾ ಉಗ್ರ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಫೋಟೊಗಳನ್ನು ಬಳಸಲಾಗಿತ್ತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶಂಕಿತ ವ್ಯಕ್ತಿ ಇಸ್ಲಾಮಿಸ್ಟ್ ಮೂಲಭೂತವಾದಿ ವಿಚಾರಧಾರೆಗೆ ಒಳಗಾಗಿದ್ದ ಎಂದು ದೃಢಪಡಿಸಿದ್ದು, ಯುಎಇ ಹಾಗೂ ಇಸ್ರೇಲಿ ತನಿಖಾ ಸಂಸ್ಥೆಗಳು ಈತನ ಆನ್‌ಲೈನ್ ಚಟುವಟಿಕೆಗಳು ಮತ್ತು ಉಗ್ರ ಸಂಘಟನೆಗಳ ಜೊತೆಗಿನ ಸಂಪರ್ಕದ ಬಗ್ಗೆ ತೀವ್ರ ತನಿಖೆ ಮುಂದುವರಿಸಿವೆ. ಆಮೂಲಾಗ್ರ ವಿಚಾರಧಾರೆಗಾಗಿ ಕೆಲಸದಿಂದ ತೆಗೆದುಹಾಕಲ್ಪಟ್ಟ ವ್ಯಕ್ತಿಯೊಬ್ಬ ಫ್ಲೈದುಬೈನಂತಹ ಪ್ರಮುಖ ಸಂಸ್ಥೆಗೆ ಸೇರ್ಪಡೆಯಾಗಿದ್ದು ಹೇಗೆ ಎಂಬುದು ಜಾಗತಿಕ ವಿಮಾನಯಾನ ಕ್ಷೇತ್ರಗಳಲ್ಲಿ ಹಿನ್ನೆಲೆ ಪರಿಶೀಲನೆ (Background Verification) ಕುರಿತು ದೊಡ್ಡ ಮಟ್ಟದ ಕಳವಳಕ್ಕೆ ಕಾರಣವಾಗಿದೆ.

