ಮಹಿಳಾ ಪಿಎಸ್ಐಗೆ ಶಾಸಕ ಸುರೇಶ್ ಗೌಡ ಪುತ್ರಿಯಿಂದ ಕಪಾಳಮೋಕ್ಷ: ಎಫ್‌ಐಆರ್ ದಾಖಲು..!

Prakhara News
1 Min Read

ಮಂಡ್ಯ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ (PSI) ಸವಿತಾ ಅವರು ನೀಡಿದ ದೂರಿನನ್ವಯ ಐಶ್ವರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆ.12ರಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ವೇಳೆ ಶಾಸಕರ ಪುತ್ರಿ ಐಶ್ವರ್ಯ ಅವರು ತಮ್ಮ ಪ್ರಭಾವ ಬಳಸಿ ವಿಐಪಿ ಪ್ರವೇಶ ಪಡೆದಿದ್ದರು.

ಗರ್ಭಗುಡಿ ಬಳಿ ಬಂದು ನಿಂತು ಒಳಗೆ ಬಿಡಿ ಎಂದು ಕೇಳಿದರು. ಅದಕ್ಕೆ ಇಂದು ಆಗಲ್ಲ. ಹೆಚ್ಚಿನ ಜನರಿದ್ದಾರೆ. ನಿಮ್ಮನ್ನು ಬಿಟ್ಟರೆ ಸಾಲಿನಲ್ಲಿ ನಿಂತ ಭಕ್ತರು ಗಲಾಟೆ ಮಾಡುತ್ತಾರೆ. ಹೀಗಾಗಿ ಸ್ವಲ್ಪ ಹೊತ್ತು ಕಾಯಿರಿ ಎಂದು ಪಿಎಸ್‌ಐ ಸವಿತಾ ಹೇಳಿದ್ದರು. ಇದೇ ಸಂದರ್ಭದಲ್ಲಿ ಮಫ್ತಿಯಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್‌ ಲಕ್ಷ್ಮಿ ಅವರು ಗರ್ಭಗುಡಿಗೆ ತೆರಳಿದಾಗ, ಅದನ್ನು ಐಶ್ವರ್ಯ ಪ್ರಶ್ನಿಸಿದರು.

ಆಗ ಅವರು ನಮ್ಮ ಸರ್ಕಲ್ ಇನ್ಸ್‌ಪೆಕ್ಟರ್‌, ಡ್ಯೂಟಿಯಲ್ಲಿದ್ದಾರೆ ಎಂದು ಸವಿತಾ ಸ್ಪಷ್ಟಪಡಿಸಿದರು. ಇದರ ನಡುವೆಯೂ ನಾನು ಹೋಗಬೇಕು ಬಿಡಿ ಎಂದು ಇಬ್ಬರ ನಡುವೆ ವಾಗ್ವಾದ ನಡೆದು, ಕೊನೆಗೆ ಐಶ್ವರ್ಯ ಅವರು ಪಿಎಸ್‌ಐ ಸವಿತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ (Kyatanahalli Police Station)) ಪ್ರಕರಣ ದಾಖಲಾಗಿದೆ.

Share This Article
Leave a Comment