ಬೆಂಗಳೂರು: ರಾಜ್ಯಾದ್ಯಂತ ನಿಕೋಟಿನ್‌ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ಹೊರಡಿಸಲಾಗಿದ್ದ ಸರ್ಕಾರದ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಏಕಾಏಕಿ ಕೈಗೊಂಡಿದ್ದ ಈ ನಿರ್ಧಾರಕ್ಕೆ ಆಡಳಿತ ಪಕ್ಷದ ಶಾಸಕರು ಹಾಗೂ ರೈತ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಮುಖ್ಯಮಂತ್ರಿಗಳು ಈ ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ.


ರಾಜ್ಯ ಸರ್ಕಾರದ ಈ ನಿಷೇಧದ ತೀರ್ಮಾನಕ್ಕೆ ಸ್ವತಃ ಕಾಂಗ್ರೆಸ್‌ನ ಕೆಲವು ಹಿರಿಯ ಶಾಸಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಿನ್ನೆ ಹಿರಿಯ ಶಾಸಕರ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ರಾಜ್ಯದ ವಿವಿಧ ಭಾಗಗಳ ರೈತರ ಹಿತದೃಷ್ಟಿಯಿಂದ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಮನವಿ ಮಾಡಿತ್ತು. ಈ ವೇಳೆ ವಿಷಯ ತಿಳಿದ ಮುಖ್ಯಮಂತ್ರಿಗಳು, “ಈ ನಿರ್ಧಾರದ ಕುರಿತು ನನಗೆ ಯಾವುದೇ ರೀತಿಯ ಮುನ್ಸೂಚನೆ ಅಥವಾ ಮಾಹಿತಿ ಇರಲಿಲ್ಲ” ಎಂದು ಸ್ಪಷ್ಟಪಡಿಸಿದರು.

ಬಳಿಕ ನಡೆದ ರಾಜ್ಯ ಸಂಪುಟ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಯಿತು. ಈ ವೇಳೆ ಆರೋಗ್ಯ ಇಲಾಖೆ ಕಾರ್ಯದರ್ಶಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಶಿವಕುಮಾರ್, “ಇಂತಹ ಗಂಭೀರ ಸ್ವರೂಪದ ಆದೇಶವನ್ನು ನನ್ನ ಗಮನಕ್ಕೆ ತರದೆ ಹೇಗೆ ಹೊರಡಿಸಿದಿರಿ?” ಎಂದು ಪ್ರಶ್ನಿಸಿದರು. ಅಲ್ಲದೆ, “ಈ ನಿರ್ಧಾರದಿಂದ ರಾಜ್ಯದ ಸುಮಾರು 7 ರಿಂದ 8 ಜಿಲ್ಲೆಗಳ ರೈತರ ಮೇಲೆ ನೇರ ಹಾಗೂ ತೀವ್ರ ಪ್ರಮಾಣದ ಪರಿಣಾಮ ಬೀರಲಿದೆ. ಹೀಗಾಗಿ ಯಾವುದೇ ಪ್ರಮುಖ ನೀತಿ ನಿರ್ಧಾರ ಕೈಗೊಳ್ಳುವ ಮುನ್ನ ನನ್ನ ಗಮನಕ್ಕೆ ತರುವುದು ಕಡ್ಡಾಯ” ಎಂದು ಖಾರವಾಗಿ ನುಡಿದರು.

ರೈತರ ಹಿತರಕ್ಷಣೆ ಹಾಗೂ ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪರಿಣಾಮವಾಗಿ ಆರೋಗ್ಯ ಇಲಾಖೆಯು ಶೀಘ್ರದಲ್ಲೇ ಈ ಹಿಂದಿನ ಆದೇಶವನ್ನು ರದ್ದುಗೊಳಿಸಿ ಹೊಸ ಮಾರ್ಗದರ್ಶಿ ಹೊರಡಿಸುವ ಸಾಧ್ಯತೆಯಿದೆ.


