ಬಂಟ್ವಾಳ: ಚಿನ್ನವನ್ನು ದೋಚುವ ಹುನ್ನಾರದಲ್ಲಿ 2021 ಜನವರಿ 25ರಂದು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲಿ ಎಂಬಲ್ಲಿಯ ಹಿರಿಯ ಮಹಿಳೆ ಬೆನಡಿಕ್ಟ್ ಕಾರ್ಲೋ ಎಂಬವರಿಗೆ ವಿಷವುಣಿಸಿ, ಉಸಿರುಗಟ್ಟಿಸಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.


ಅಮ್ಮಾಡಿ ಹೀರಾ ನಿವಾಸಿ ವಿಲ್ಮಾ ಪ್ರಸ್ಟಿತಾ ಬಾರೆಟೊ (30), ನರಿಕೊಂಬು ಅಂತರಹೌಸ್ ನಿವಾಸಿ ಸತೀಶ್ (33) ನರಿಕೊಂಬು ಪದಕಟ್ಟೆ ಹೊಯಿಗೆಬೈಲು ನಿವಾಸಿ ಚರಣ್ ಕುಮಾರ್ (34) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.

ಬಂಟ್ವಾಳದ ಅಮ್ಮುಂಜೆಯ ಪಾಂಡೀಲಿ ಎಂಬಲ್ಲಿ ಬೆನೆಡಿಕ್ಟ್ ಕಾರ್ಲೊ (80) ಅವರು ತನ್ನ ಪತಿ ಇನಾಸ್ ಕಾರ್ಲೋ ಜತೆ ವಾಸಿಸುತ್ತಿದ್ದರು. ಇನಾರ್ಸ್ ಕಾರ್ಲೋ ಅವರು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಈ ದಂಪತಿಯ ಆರೈಕೆಗಾಗಿ ವಿಲ್ಮಾ ಪ್ರಸ್ಟಿತಾ ಎರಡು ತಿಂಗಳಿನಿಂದ ಕೆಲಸಕ್ಕೆ ಬರುತ್ತಿದ್ದಳು. ಬೆನೆಡಿಕ್ಟ್ ಅವರಲ್ಲಿ ಚಿನ್ನಾಭರಣಗಳಿರುವುದನ್ನು ಗಮನಿಸಿದ ವಿಲ್ಮಾ ಅದನ್ನು ದೋಚುವ ಸಂಚು ರೂಪಿಸಿದ್ದಳು. ತನ್ನ ಪರಿಚಯದ ಸತೀಶನಿಗೆ ಈ ಮಾಹಿತಿ ನೀಡಿದಾಗ ಆತ ಬೆನೆಡಿಕ್ಟ್ ಕಾರ್ಲೋ ಅವರಿಗೆ ಆಹಾರದ ಜತೆ ವಿಷ ಉಣಿಸುವ ಸಲಹೆ ನೀಡುತ್ತಾನೆ. ಅದರಂತೆ 2021ರ ಜ.25ರಂದು ರಾತ್ರಿ ವಿಲ್ಮಾ ವಿಷವುಣಿಸಿದ್ದಳು. ಇದರಿಂದ ಬೆನೆಡಿಕ್ಟಾ ಅರೆಜೀವ ಸ್ಥಿತಿಯಲ್ಲಿದ್ದರು. ಈ ವೇಳೆ ವಿಲ್ಮಾ ಮತ್ತೆ ಸತೀಶ್‌ಗೆ ಕರೆ ಮಾಡಿದ್ದು, ಬೆನೆಡಿಕ್ಟಾರನ್ನು ಉಸಿರುಗಟ್ಟಿ ಕೊಲ್ಲುವ ಯೋಜನೆ ರೂಪಿಸುತ್ತಾರೆ. ಅದಕ್ಕಾಗಿ ಚರಣ್ ಕುಮಾರ್ ಎಂಬಾತನನ್ನು ಸತೀಶ್ ಆ ಮನೆಗೆ ಕಳುಹಿಸುತ್ತಾನೆ.

ಚರಣ್ ಕುಮಾರ್ ಆ ಮನೆಗೆ ತೆರಳಿ ವಿಲ್ಮಾ ಜತೆ ಸೇರಿಕೊಂಡು ಬೆನೆಡಿಕ್ಟರನ್ನು ತಲೆದಿಂಬು ಹಾಗೂ ಬೈರಾಸ್‌ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡುತ್ತಾರೆ.
ಬಳಿಕ ಬೆನೆಟಿಕ್ಚಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಮನೆಯಲ್ಲಿದ್ದ ಚಿನ್ನದ ಕಿವಿಯೊಲೆ, ಕೈ ಬಳೆ, ಉಂಗುರಗಳು, ಚೈನ್ ಸೇರಿದಂತೆ ಸುಮಾರು 2,75,000 ರೂಪಾಯಿ ಮೌಲ್ಯದ ಒಟ್ಟು 61.070 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗುತ್ತದೆ. ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ವ್ಯವಸ್ಥಿತ ಕೊಲೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಒಟ್ಟು 44 ಸಾಕ್ಷಿದಾರರ ಪೈಕಿ 32 ಸಾಕ್ಷಿದಾರ ವಿಚಾರಣೆ ನಡೆಸಿ ಮೂವರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿಗಳು ಪಾವತಿಸಿದ ಒಟ್ಟು 33 ಸಾವಿರ ರೂ. ದಂಡದಲ್ಲಿ 8 ಸಾವಿರ ರೂ ಗಳನ್ನು ಸರ್ಕಾರಕ್ಕೆ ಪಾವತಿಸಬೇಕು ಹಾಗೂ 25 ಸಾವಿರ ರೂ.ನ್ನು ಮೃತರ ಮಗ ರೊನಾಲ್ಡ್ ಕಾರ್ಲೋ ಅವರಿಗೆ ನೀಡಲು ಆದೇಶಿಸಲಾಗಿದೆ. ಅಂದು ಬಂಟ್ವಾಳ ಠಾಣಾ ಪೊಲೀಸ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ.ಡಿ. ನಾಗರಾಜ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕರವರು ಸಮರ್ಥವಾಗಿ ವಾದ ಮಂಡಿಸಿ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


