ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ₹1.07 ಕೋಟಿ ಲಾಭ; ಸದಸ್ಯರಿಗೆ ಶೇ.22 ಡಿವಿಡೆಂಡ್

Prakhara News
3 Min Read

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ₹1.07 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ಘೋಷಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.

ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಸಂಘದ ಪ್ರಧಾನ ಕಚೇರಿಯ ಸಪ್ತವರ್ಣ ಸಭಾಂಗಣದಲ್ಲಿ ಶನಿವಾರ ನಡೆದ ಸಂಘದ 95ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಸಂಘದ ನೌಕರ ಸದಸ್ಯರೇ ಸಂಘದ ಜೀವಾಳ. ಸದಸ್ಯರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ, ಆಡಳಿತ ಮಂಡಳಿಯ ನಿರ್ದೇಶಕರ ಸಂಘಟಿತ ಕಾರ್ಯನಿರ್ವಹಣೆ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ,” ಎಂದು ಅವರು ಹೇಳಿದರು.

₹199.75 ಕೋಟಿ ವ್ಯವಹಾರ:
ಸಹಕಾರ ಸಂಘಗಳ ನೌಕರ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡುವ ಮೂಲಕ ಸಂಘವು ವರದಿ ವರ್ಷದಲ್ಲಿ ₹1.07 ಕೋಟಿ ಲಾಭ ಗಳಿಸಿದೆ. ಸಂಘವು ₹29.16 ಲಕ್ಷ ಪಾಲು ಬಂಡವಾಳ ಹಾಗೂ ₹7.94 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ.

ಠೇವಣಿ ಸಂಗ್ರಹಣೆಯಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದ್ದು, ಠೇವಣಿ ಮೊತ್ತವು ಹಿಂದಿನ ಸಾಲಿನ ಅಂತ್ಯದಲ್ಲಿದ್ದ ₹94.33 ಕೋಟಿಯಿಂದ ₹108.08 ಕೋಟಿಗೆ ಏರಿಕೆಯಾಗಿದೆ. ಸಾಲ ಮುಂಗಡ ಮೊತ್ತವು ₹82.90 ಕೋಟಿಯಿಂದ ₹91.67 ಕೋಟಿಗೆ ಹೆಚ್ಚಳವಾಗಿದೆ. ಇದರೊಂದಿಗೆ ಸಂಘದ ಒಟ್ಟು ವ್ಯವಹಾರವು ₹177.23 ಕೋಟಿಯಿಂದ ₹199.75 ಕೋಟಿಗೆ ಏರಿಕೆಯಾಗಿದೆ ಎಂದು ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದರು.

ತಾಲೂಕುವಾರು ಶಾಖೆ ತೆರೆಯುವ ಯೋಜನೆ:
ಸಂಘವು ಪ್ರಸ್ತುತ ನಾಲ್ಕು ಶಾಖೆಗಳನ್ನು ಹೊಂದಿದ್ದು, ಮಂಗಳೂರಿನಲ್ಲಿ ಎರಡು ಹಾಗೂ ಉಡುಪಿ ಮತ್ತು ಪುತ್ತೂರಿನಲ್ಲಿ ತಲಾ ಒಂದು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸದಸ್ಯರಿಗೆ ಇನ್ನಷ್ಟು ಹತ್ತಿರವಾಗುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ತಾಲೂಕುವಾರು ಶಾಖೆಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಸತತ 9ನೇ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧನಾ ಪ್ರಶಸ್ತಿ:
ಸಂಘದ ಪ್ರಗತಿಯನ್ನು ಗುರುತಿಸಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಕಳೆದ ಎಂಟು ವರ್ಷಗಳಿಂದ ಸತತವಾಗಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. 2017-18ರಿಂದ 2024-25ರವರೆಗೆ ಸತತ ಎಂಟು ಬಾರಿ ಪ್ರಶಸ್ತಿ ಪಡೆದಿರುವ ಸಂಘವು 2025-26ನೇ ಸಾಲಿನಲ್ಲೂ ಸಾಧನಾ ಪ್ರಶಸ್ತಿಗೆ ಪಾತ್ರವಾಗಿದೆ. ಇದರೊಂದಿಗೆ ಸಂಘವು ಸತತ 9ನೇ ಬಾರಿಗೆ ಪ್ರತಿಷ್ಠಿತ ಸಾಧನಾ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅಂಚನ್ ತಿಳಿಸಿದರು.

ಡಾ.ಎಂ.ಎನ್.ರಾಜೇಂದ್ರಕುಮಾರ್ ಮಾರ್ಗದರ್ಶನ:
ಸಂಘದ ನಿರಂತರ ಅಭಿವೃದ್ಧಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರ ರಂಗದ ಅಗ್ರಗಣ್ಯ ನಾಯಕ ‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರ ಸಲಹೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ಪ್ರಮುಖ ಕಾರಣವಾಗಿದೆ ಎಂದು ಅಂಚನ್ ಹೇಳಿದರು.

ಅವರ ದೂರದೃಷ್ಟಿಯ ನಾಯಕತ್ವದ ಫಲವಾಗಿ ಕೊಡಿಯಾಲ್ ಬೈಲ್‌ನಲ್ಲಿ ಸಂಪೂರ್ಣ ಹವಾನಿಯಂತ್ರಿತ ಆಡಳಿತ ಕಚೇರಿ, ಶಾಖೆ ಹಾಗೂ ಎರಡು ಸಭಾಂಗಣಗಳನ್ನು ಒಳಗೊಂಡ ಮೂರು ಮಹಡಿಯ ಸುಸಜ್ಜಿತ ‘ಉನ್ನತಿ’ ಸ್ವಂತ ಕಟ್ಟಡವನ್ನು ಹೊಂದಲು ಸಾಧ್ಯವಾಗಿದೆ. ಇದು ಸಂಘದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದರು. ಸಂಘದ ಬೆಳವಣಿಗೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರಿಗೆ ಸರ್ವ ಸದಸ್ಯರ ಪರವಾಗಿ ಅಂಚನ್ ಕೃತಜ್ಞತೆ ಸಲ್ಲಿಸಿದರು

47 ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ:
ಸಂಘವು ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿದೆ.ಈ ಬಾರಿ ಶೇ.70ಕ್ಕಿಂತ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ 47 ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹಧನ ವಿತರಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಂಘವು ಕಳೆದ ಐದು ವರ್ಷಗಳಿಂದ ಸತತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಶ್ರದ್ಧಾಂಜಲಿ:
ಸಂಘದ ಹಿರಿಯ ಸದಸ್ಯರಾದ ಪ್ರಕಾಶ್ ಕೆ. (ಎಸ್‌ಸಿಡಿಸಿಸಿ ಬ್ಯಾಂಕ್), ಬಾಲಕೃಷ್ಣ ಹೆಚ್. (ಎಸ್‌ಸಿಡಿಸಿಸಿ ಬ್ಯಾಂಕ್), ರವಿಚಂದ್ರ ಶೆಟ್ಟಿ (ಹಾಪ್‌ಕಾಮ್ಸ್) ಹಾಗೂ ಸಂಘದ ಪುತ್ತೂರು ಶಾಖೆಯ ವ್ಯವಸ್ಥಾಪಕ ರಾಮನಾಥ ಅವರು ಇತ್ತೀಚೆಗೆ ನಿಧನರಾಗಿದ್ದು, ಮಹಾಸಭೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಘವ ಆರ್. ಉಚ್ಚಿಲ್, ನಿರ್ದೇಶಕರಾದ ದಿವಾಕರ ಶೆಟ್ಟಿ ಕೆ, ವಿಶ್ವೇಶ್ವರ ಐತಾಳ್, ಜಯಪ್ರಕಾಶ್ ರೈ ಸಿ, ವಿಶ್ವನಾಥ ಕೆ.ಟಿ., ಚಂದ್ರಕಲಾ ಕೆ., ಮೋಹನ್ ಎನ್, ವಿಶ್ವನಾಥ್ ಅಮೀನ್, ಗೀತಾಕ್ಷಿ, ಕಿರಣ್ ಕುಮಾರ್ ಶೆಟ್ಟಿ, ನಿಶಿತಾ ಜಯರಾಮ್ ಹಾಗೂ ಪ್ರೇಮ್ ರಾಜ್ ಭಂಡಾರಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ, 2025-26ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಉಪಾಧ್ಯಕ್ಷ ರಾಘವ ಆರ್.ಉಚ್ಚಿಲ್ ವಂದಿಸಿದರು.

Share This Article
Leave a Comment