ಮಂಗಳೂರು: ಕಣ್ಣೂರಿನಲ್ಲಿ ಮಧ್ಯರಾತ್ರಿ ತಲವಾರು ಹಿಡಿದು ರೌಡಿಶೀಟರ್‌ಗಳ ಗ್ಯಾಂಗ್ ವಾರ್ ಗೆ ಯತ್ನ- ಸುಮೋಟೋ ಕೇಸ್ ದಾಖಲು

Prakhara News
1 Min Read

ಮಂಗಳೂರು : ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಗಾಣದಬೆಟ್ಟು ಜಂಕ್ಷನ್‌ನಲ್ಲಿ ಇಬ್ಬರು ರೌಡಿಶೀಟರ್‌ಗಳ ತಂಡಗಳು ಸಾರ್ವಜನಿಕ ರಸ್ತೆಯಲ್ಲಿ ತಲವಾರು ಝಳಪಿಸಿ ಗ್ಯಾಂಗ್ ವಾರ್ ನಡೆಸಲು ಯತ್ನಿಸಿದ ಘಟನೆಗೆ ನಡೆದಿದ್ದು, ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 9ರಂದು ರಾತ್ರಿ 11:00 ರಿಂದ 11:30 ರ ಸುಮಾರಿಗೆ ಕಣ್ಣೂರು ಗ್ರಾಮದ ಗಾಣದಬೆಟ್ಟು ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಠಾಣಾ ರೌಡಿ ಆಸಾಮಿ ‘ಡೀಲ್ ನೌಫಲ್’ ಹಾಗೂ ಆತನ ಸಹಚರರಾದ ಅಮ್ಮಿ, ಕೊಟ್ಟು ನಿಜಾಂ ಮತ್ತಿತರರು ಒಂದು ತಂಡದಲ್ಲಿದ್ದರೆ, ಇನ್ನೊಂದೆಡೆ ಮೃತಪಟ್ಟಿರುವ ರೌಡಿ ಟೊಪ್ಪಿ ನೌಫಲ್‌ನ ಸಹಚರರಾದ ರೌಡಿ ಆಸಾಮಿ ಅನ್ಸಾರ್, ಆಸೀಪ್ ಯಾನೆ ಮೊಪ್ಪು ಆಚಿ ಹಾಗೂ ಇಕ್ಬಾಲ್ ಯಾನೆ ಪಾಪು ಮತ್ತಿತರರು ಇನ್ನೊಂದು ತಂಡದಲ್ಲಿದ್ದರು.

ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಎರಡು ಕಾರುಗಳಲ್ಲಿ ಬಂದಿದ್ದ ಈ ರೌಡಿ ಪಡೆಗಳು ಸಾರ್ವಜನಿಕ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ, ಕೈಯಲ್ಲಿ ಮಾರಕಾಯುಧಗಳಾದ ತಲವಾರುಗಳನ್ನು ಹಿಡಿದು ಝಳಪಿಸುತ್ತಾ ಪರಸ್ಪರ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ರೌಡಿ ಗ್ಯಾಂಗ್‌ಗಳ ನಡುವಿನ ಗಲಾಟೆಯಿಂದ ಸ್ಥಳದಲ್ಲಿ ಭೀಕರ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗಿತ್ತು. ಅಲ್ಲದೆ, “ಈ ಬಗ್ಗೆ ಯಾರಾದರೂ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಸಾರ್ವಜನಿಕರಿಗೂ ಜೀವ ಬೆದರಿಕೆ ಒಡ್ಡಿದ್ದರು. ಇದರಿಂದಾಗಿ ಸಾರ್ವಜನಿಕರು ಭಯದಿಂದ ದೂರು ನೀಡಲು ಹಿಂಜರಿದಿದ್ದರು.

ಘಟನೆಯ ಬಗ್ಗೆ ಸೆಪ್ಟೆಂಬರ್ 10ರಂದು ಮಾಹಿತಿ ಲಭಿಸುತ್ತಿದ್ದಂತೆ ಕಂಕನಾಡಿ ನಗರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಸಿಬ್ಬಂದಿ ಸಿದ್ಧರಾಮ ಅವರು ಸ್ಥಳಕ್ಕೆ ಧಾವಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕಂಕನಾಡಿ ನಗರ ಪೊಲೀಸರು, ಅಕ್ರಮ ಕೂಟ ರಚನೆ, ಸಾರ್ವಜನಿಕ ಸ್ಥಳದಲ್ಲಿ ಮಾರಕಾಯುಧ ಪ್ರದರ್ಶನ, ಗ್ಯಾಂಗ್ ವಾರ್ ಯತ್ನ ಹಾಗೂ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಎರಡೂ ಗ್ಯಾಂಗ್‌ನ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Share This Article
Leave a Comment