ಪುತ್ತೂರು: ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಸುಟ್ಟ ವಿಚಾರಕ್ಕೆ ಗಲಾಟೆ, ಪರಸ್ಪರ ಹಲ್ಲೆ: ಕೌಂಟರ್ ಕೇಸ್ ದಾಖಲು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧವೂ ಪ್ರಕರಣ..!

Prakhara News
1 Min Read

ಪುತ್ತೂರು : ದಾಖಲೆಪತ್ರ ಲ್ಯಾಮಿನೇಷನ್ ಮಾಡುವಾಗ ತಾಂತ್ರಿಕ ದೋಷದಿಂದ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ಪುತ್ತೂರಿನ ದರ್ಭೆಯಲ್ಲಿ ಆಗಸ್ಟ್ 21ರ ಮಧ್ಯಾಹ್ನ ಸಂಭವಿಸಿದೆ.

ಸುಳ್ಯ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬುವವರು ಪುತ್ತೂರಿನ ದರ್ಭೆಯಲ್ಲಿರುವ ಅಂಜನಾ ಪೈ ಎಂಬುವರಿಗೆ ಸೇರಿದ “Dream destination digital seva Kendra” ಅಂಗಡಿಗೆ ತೆರಳಿ ಕೆಲವು ದಾಖಲಾತಿಗಳನ್ನು ಜೆರಾಕ್ಸ್ ಹಾಗೂ ಲ್ಯಾಮಿನೇಷನ್ ಮಾಡಲು ನೀಡಿದ್ದರು. ಈ ವೇಳೆ ಒಂದು ದಾಖಲೆಪತ್ರ ತಾಂತ್ರಿಕ ದೋಷದಿಂದ ಸುಟ್ಟುಹೋಗಿದೆ. ಈ ವಿಚಾರವಾಗಿ ಗ್ರಾಹಕರು ಹಾಗೂ ಅಂಗಡಿಯ ಅಂಜನಾ ಪೈ ಮತ್ತು ಅವರ ಮಗ ಸುದರ್ಶನ್ ಪೈ ನಡುವೆ ತೀವ್ರ ವಾಗ್ವಾದ ನಡೆದು, ಪರಸ್ಪರ ಹಲ್ಲೆ ನಡೆಸಿದ್ದಾರೆ.

ಘಟನಾ ಸ್ಥಳದಲ್ಲಿ ಸಾರ್ವಜನಿಕರ ಗುಂಪು ಸೇರಿದಾಗ, ಸ್ಥಳಕ್ಕೆ ಧಾವಿಸಿದ ಪುತ್ತೂರು ನಗರ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಎರಡೂ ಕಡೆಯವರಿಗೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದರು. ಆದರೆ, ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆತರುವ ವೇಳೆ ಸ್ಥಳದಲ್ಲಿದ್ದ ಕೆಲವು ಸಾರ್ವಜನಿಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿ ದೂರು (Counter Case) ದಾಖಲಾಗಿದೆ. ಅಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಅಂಗಡಿಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮುಂದಿನ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುಳ್ಳು ವದಂತಿಗಳನ್ನು ಪ್ರಸಾರ ಮಾಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

Share This Article
Leave a Comment