ಶಬರಿಮಲೆ ಯಾತ್ರಿಕರಿಗೆ ಸಿಹಿ: ಕ್ಯಾಬಿನ್‌ನಲ್ಲಿ ‘ಇರುಮುಡಿ’ ಕೊಂಡೊಯ್ಯಲು ಕೇಂದ್ರ ಗ್ರೀನ್ ಸಿಗ್ನಲ್..!

Prakhara News
1 Min Read

ನವದೆಹಲಿ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಭರ್ಜರಿ ಸಿಹಿ ಸುದ್ದಿ ನೀಡಿದೆ. ವಿಮಾನದ ಮೂಲಕ ಯಾತ್ರೆ ಕೈಗೊಳ್ಳುವ ಭಕ್ತರು ಸತತ ಮೂರನೇ ವರ್ಷವೂ ತಮ್ಮ ಪವಿತ್ರ ‘ಇರುಮುಡಿ ಕಟ್ಟು’ ವಿಮಾನದ ಕ್ಯಾಬಿನ್‌ನಲ್ಲಿಯೇ (ಹ್ಯಾಂಡ್ ಬ್ಯಾಗೇಜ್ ಆಗಿ) ಕೊಂಡೊಯ್ಯಲು ಕೇಂದ್ರ ಸರ್ಕಾರ ಅಧಿಕೃತ ಅನುಮತಿ ನೀಡಿದೆ.

ಸಾಮಾನ್ಯವಾಗಿ ವಿಮಾನಯಾನದ ಕಟ್ಟುನಿಟ್ಟಿನ ಭದ್ರತಾ ನಿಯಮಗಳ ಪ್ರಕಾರ, ತೆಂಗಿನಕಾಯಿ ಸೇರಿದಂತೆ ಕೆಲವು ಪೂಜಾ ಸಾಮಗ್ರಿಗಳನ್ನು ಕ್ಯಾಬಿನ್ ಒಳಗೆ ಕೊಂಡೊಯ್ಯಲು ನಿರ್ಬಂಧವಿರುತ್ತದೆ. ಆದರೆ, ಶಬರಿಮಲೆ ಭಕ್ತರ ಶತಮಾನಗಳ ಸಂಪ್ರದಾಯ ಮತ್ತು ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿರುವ ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರು, ಈ ಮಂಡಲ-ಮಕರವಿಳಕ್ಕು ಯಾತ್ರೆಯ ಅವಧಿಯಲ್ಲೂ ಭದ್ರತಾ ನಿಯಮಗಳಲ್ಲಿ ವಿಶೇಷ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಯಾತ್ರಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಹಾಗೂ ದೇಶದ ಎಲ್ಲಾ ವಿಮಾನ ನಿಲ್ದಾಣಗಳ ನಿರ್ವಾಹಕರಿಗೆ ಸಚಿವಾಲಯವು ಸ್ಪಷ್ಟ ನಿರ್ದೇಶನ ನೀಡಿದೆ. ಇದರಿಂದಾಗಿ ಭಕ್ತರು ತಮ್ಮ ಇರುಮುಡಿಯನ್ನು ಚೆಕ್-ಇನ್ ಲಗೇಜ್‌ಗೆ ಹಾಕುವ ಆತಂಕವಿಲ್ಲದೆ, ಭಕ್ತಿಪೂರ್ವಕವಾಗಿ ತಮ್ಮೊಂದಿಗೆ ಕ್ಯಾಬಿನ್‌ನಲ್ಲಿಯೇ ಕೊಂಡೊಯ್ಯಬಹುದಾಗಿದೆ.

Share This Article
Leave a Comment