ಬೆಳ್ತಂಗಡಿ : ಶಾಲೆಗೆ ತೆರಳಲು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅನುಚಿತವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿ, ಬಳಿಕ ಅತ್ಯಾಚಾರ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.


ಪೊಲೀಸ್ ಪ್ರಕಟಣೆ ಪ್ರಕಾರ, ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ ಜಮಾಲುದ್ದೀನ್ ಎಂಬಾತನ ರಿಕ್ಷಾದಲ್ಲಿ ಬಾಲಕಿ ಕೆಲವು ತಿಂಗಳುಗಳಿಂದ ಶಾಲೆಗೆ ಹೋಗಿ ಬರುತ್ತಿದ್ದಳು. ಈ ವೇಳೆ ಆರೋಪಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಬಾಲಕಿ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಯಗೊಂಡ ಬಾಲಕಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ.

ಆಗಸ್ಟ್ 13ರಂದು ಸಂಜೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಮನೆಗೆ ಬಂದ ಆರೋಪಿ ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆಗಸ್ಟ್ 15ರಂದು ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 56/2026ರಂತೆ BNS 2023ರ ಕಲಂ 75(2), 64(1), 65(1), 351(3) ಹಾಗೂ ಪೋಕ್ಸೋ ಕಾಯ್ದೆ-2012ರ ಕಲಂ 4(2), 8, 12 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ಆಗಸ್ಟ್ 15ರಂದು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


