ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾನೆ ವೇಳೆಯಲ್ಲಿ ಗುಡುಗು–ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲಿನ ಹೊಡೆತಕ್ಕೆ ಮನೆ ಸಂಪೂರ್ಣ ಜಖಂಗೊಂಡ ಘಟನೆ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದಲ್ಲಿ ನಡೆದಿದೆ.


ಅಜ್ಜಿಬೆಟ್ಟು ಗ್ರಾಮದ ಅನಿಲ್ದಡ್ಡ ಎಂಬಲ್ಲಿ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ನಾಗೇಶ್ ಕುಲಾಲ್ ಅವರ ಮನೆಗೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಸಿಡಿಲಿನ ತೀವ್ರ ಹೊಡೆತಕ್ಕೆ ಮನೆಯ ಹಂಚು, ಗೋಡೆ ಹಾಗೂ ಕಿಟಕಿ ಗಾಜುಗಳು ಹಾನಿಗೊಂಡಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ.
ಘಟನೆಯ ವೇಳೆ ಮನೆಯಲ್ಲಿದ್ದ ನಾಗೇಶ್ ಕುಲಾಲ್ ಅವರ ಪತ್ನಿ ಕುಶಲ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮುಂಜಾನೆ ಗುಡುಗು–ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲಿನ ಆರ್ಭಟದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಳೆಯಿಂದಾಗಿ ಕೆಲವು ಕಡೆ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

