ಅಬುಧಾಬಿ : ಯುಎಇ (UAE) ಅಬುಧಾಬಿ ಗ್ಲೋಬಲ್ ಮಾರ್ಕೆಟ್ (ADGM) ನ್ಯಾಯಾಲಯವು ಯುಎಇ ಆಧಾರಿತ ಬೃಹತ್ ಹೆಲ್ತ್ಕೇರ್ ಸಂಸ್ಥೆಯಾಗಿದ್ದ ‘ಎನ್ಎಮ್ಸಿ ಹೆಲ್ತ್ಕೇರ್’ (NMC Healthcare) ಸಂಸ್ಥೆಯ ಶತಕೋಟಿ ಡಾಲರ್ ಆರ್ಥಿಕ ವಂಚನೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.


ಸಂಸ್ಥೆಯ ಸಹ-ಸಂಸ್ಥಾಪಕ, ಭಾರತೀಯ ಮೂಲದ ಉದ್ಯಮಿ ಬಾವಗುತ್ತು ರಘುರಾಮ್ ಶೆಟ್ಟಿ (ಬಿ.ಆರ್. ಶೆಟ್ಟಿ) ಹಾಗೂ ಸಂಸ್ಥೆಯ ಮಾಜಿ ಸಿಇಒ ಪ್ರಶಾಂತ್ ಮಂಗಾಟ್ ಅವರನ್ನು ನ್ಯಾಯಾಲಯವು ತಪ್ಪಿತಸ್ಥರು ಎಂದು ಘೋಷಿಸಿದೆ. ಕಂಪನಿಯ ನಿಧಿಯ ದುರುಪಯೋಗ, ಸಾಲಗಳ ಮಾಹಿತಿ ಮುಚ್ಚಿಡುವುದು ಮತ್ತು ಆರ್ಥಿಕ ವರದಿಗಳಲ್ಲಿ ವಂಚನೆ ಎಸಗುವಿಕೆಯಲ್ಲಿ ಇಬ್ಬರೂ ಸಕ್ರಿಯವಾಗಿ ಭಾಗಿಯಾಗಿದ್ದಾರೆ
ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು, ಅವರಿಂದ ಬರಿಸಬೇಕಾದ ಪರಿಹಾರದ ಆಧಾರ ಮೊತ್ತವನ್ನು 5.397 ಬಿಲಿಯನ್ ಅಮೆರಿಕನ್ ಡಾಲರ್ ಎಂದು ನಿಗದಿಪಡಿಸಿದೆ.

ಸ್ಥಾಪನೆ: 1975 ರಲ್ಲಿ ಬಿ.ಆರ್. ಶೆಟ್ಟಿ ಅವರಿಂದ ಸ್ಥಾಪಿಸಲ್ಪಟ್ಟ NMC ಹೆಲ್ತ್ಕೇರ್, ಅಬುಧಾಬಿ, ದುಬೈ, ಶಾರ್ಜಾ ಸೇರಿದಂತೆ ಯುಎಇಯಾದ್ಯಂತ ಬೃಹತ್ ಆಸ್ಪತ್ರೆಗಳ ಜಾಲವನ್ನು ಹೊಂದಿತ್ತು.

ವಂಚನೆ ಬೆಳಕಿಗೆ:
2019 ರಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ‘ಮಡ್ಡಿ ವಾಟರ್ಸ್ ರಿಸರ್ಚ್’ ಸಂಸ್ಥೆಯು ವರದಿ ಬಿಡುಗಡೆ ಮಾಡುವ ಮೂಲಕ ಈ ಬೃಹತ್ ಆರ್ಥಿಕ ಅಕ್ರಮವನ್ನು ರಟ್ಟು ಮಾಡಿತು.
ಸಾಲದ ಮುಚ್ಚಿಡುವಿಕೆ: ತನಿಖೆಯಲ್ಲಿ ಕಂಪನಿಯು ಒಟ್ಟು 3.88 ಬಿಲಿಯನ್ ಡಾಲರ್ ರಹಸ್ಯ ಸಾಲವನ್ನು ಹೊಂದಿದ್ದು, ಕೇವಲ 1.99 ಬಿಲಿಯನ್ ಡಾಲರ್ ಸಾಲವನ್ನು ಮಾತ್ರ ಲೆಕ್ಕಪತ್ರದಲ್ಲಿ ತೋರಿಸಿರುವುದು ತಿಳಿದುಬಂದಿದೆ. ಇದರ ಬೆನ್ನಲ್ಲೇ 2020 ರಲ್ಲಿ ಸಂಸ್ಥೆಯು ಸಂಪೂರ್ಣವಾಗಿ ಪತನಗೊಂಡಿತು.

ವಾದ-ಪ್ರತಿವಾದಗಳನ್ನು ತಳ್ಳಿಹಾಕಿದ ಕೋರ್ಟ್:
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ “ನಾವು ಹಿರಿಯ ಅಧಿಕಾರಿಗಳ ಸಂಚಿಗೆ ಬಲಿಯಾಗಿದ್ದೇವೆ” ಎಂದು ಬಿ.ಆರ್. ಶೆಟ್ಟಿ ವಾದಿಸಿದ್ದರು. ಅಲ್ಲದೆ, ತಮ್ಮ ಬಳಿ ಆರ್ಥಿಕ ನಿರ್ಧಾರಗಳ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ ಎಂದು ಪ್ರಶಾಂತ್ ಮಂಗಾಟ್ ಪ್ರತಿವಾದಿಸಿದ್ದರು. ಆದರೆ ಈ ಇಬ್ಬರ ವಾದಗಳನ್ನು ADGM ನ್ಯಾಯಾಲಯ ಸಂಪೂರ್ಣವಾಗಿ ತಳ್ಳಿಹಾಕಿದೆ.
ಬ್ಯಾಂಕ್ ಆಫ್ ಬರೋಡಾಗೆ ರಿಲೀಫ್:
ಈ ಆರ್ಥಿಕ ವಂಚನೆಯಲ್ಲಿ ಭಾರತ ಮೂಲದ ‘ಬ್ಯಾಂಕ್ ಆಫ್ ಬರೋಡಾ’ (BOB) ಹಾಗೂ ಅದರ ಅಧಿಕಾರಿಗಳ ಪಾತ್ರವಿದೆ ಎಂದು ಬಿ.ಆರ್. ಶೆಟ್ಟಿ ಆರೋಪಿಸಿದ್ದರು. ಆದರೆ ನ್ಯಾಯಮೂರ್ತಿ ಸರ್ ಆಂಡ್ರ್ಯೂ ಸ್ಮಿತ್ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯಾವುದೇ ಪ್ರತಿಕೂಲ ಆದೇಶ ನೀಡಲು
ನಿರಾಕರಿಸಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯು ತನ್ನ ಅಬುಧಾಬಿ ಶಾಖೆಯ ಮೂಲಕ NMC ಸಂಸ್ಥೆಯೊಂದಿಗೆ 600 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹5,700 ಕೋಟಿ) ಮೌಲ್ಯದ ಹೊರ-ನ್ಯಾಯಾಲಯ ಸಂಧಾನವನ್ನು (Out-of-court settlement) ಜುಲೈನಲ್ಲಿಯೇ ಪೂರ್ಣಗೊಳಿಸಿರುವುದಾಗಿ ಈಗಾಗಲೇ ಸ್ಪಷ್ಟಪಡಿಸಿತ್ತು.



