ಉಡುಪಿ : ಪೆಟ್ರೋಲ್ ಬಂಕ್‌ಗೆ ನುಗ್ಗಿ ದಾಂಧಲೆ: ಮಾಲೀಕರ ಸಂಬಂಧಿ ಮೇಲೆ ಮಾರಣಾಂತಿಕ ಹಲ್ಲೆ ಆರೋಪ..!

Prakhara News
1 Min Read

ಉಡುಪಿ : ನಗರದ ಗುಂಡಿಬೈಲ್‌ನ ಪೆಟ್ರೋಲ್ ಬಂಕ್‌ನಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಿಚಾರವಾಗಿ ಬಂಕ್ ಮಾಲೀಕರ ಸಂಬಂಧಿ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ನವೆಂಬರ್ 7ರ ರಾತ್ರಿ ನಡೆದಿದೆ.

ನಿಟ್ಟೂರು ನಿವಾಸಿ ಆಶಿಶ್ ಶೆಟ್ಟಿ (44) ಹಲ್ಲೆಗೊಳಗಾದವರು. ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಖಾಸಗಿ ಬಸ್ ಚಾಲಕ ಆಕಾಶ್ ಎಂಬಾತ ಪೆಟ್ರೋಲ್ ಬಂಕ್ ಆವರಣದಲ್ಲಿ ಬಸ್ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಆಶಿಶ್ ಶೆಟ್ಟಿ, ಬಂಕ್ ಆವರಣದಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ತಳ್ಳಾಟವೂ ನಡೆದಿತ್ತು.

ಡೀಸೆಲ್ ತುಂಬಿಸಿಕೊಂಡು ಬಂದು ಹಲ್ಲೆ! :
ಘಟನೆ ನಡೆದ ಕೆಲ ಹೊತ್ತಿನ ಬಳಿಕ ನಾಲ್ವರು ಕಾರಿನಲ್ಲಿ ಹಾಗೂ ಮತ್ತೋರ್ವ ಲಾರಿಯಲ್ಲಿ ಪೆಟ್ರೋಲ್ ಬಂಕ್‌ಗೆ ಮರಳಿದ್ದಾರೆ. ಲಾರಿಗೆ ಸುಮಾರು ₹3 ಸಾವಿರ ಮೌಲ್ಯದ ಡೀಸೆಲ್ ತುಂಬಿಸಿಕೊಂಡ ಬಳಿಕ ಆರೋಪಿಗಳು ಏಕಾಏಕಿ ಆಶಿಶ್ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದಿದ್ದಾರೆ. ಈ ವೇಳೆ ಪುನೀತ್ ಫಲಿಮಾರ್ ಎಂಬಾತ ತನ್ನ ಕೈಯಲ್ಲಿದ್ದ ಕಡಗದಿಂದ ಆಶಿಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಖಾಸಗಿ ಆಸ್ಪತ್ರೆಗೆ ದಾಖಲು:
ಹಲ್ಲೆಯಿಂದ ಗಾಯಗೊಂಡ ಆಶಿಶ್ ಶೆಟ್ಟಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದೇ ಪುನೀತ್ ಫಲಿಮಾರ್ ಮತ್ತು ಆತನ ಸಹಚರರ ತಂಡವು ಕೆಲವು ತಿಂಗಳ ಹಿಂದೆ ಮಲ್ಪೆ ಬೀಚ್‌ನಲ್ಲಿ ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿ ಇರಿದ ಪ್ರಕರಣದಲ್ಲೂ ಭಾಗಿಯಾಗಿತ್ತು ಎಂದು ವರದಿಯಾಗಿದೆ. ಇದೀಗ ಗುಂಡಿಬೈಲ್ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಹಲ್ಲೆ ಪ್ರಕರಣ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment