ಬಳ್ಳಾರಿ: ಕನ್ನಡಕ್ಕಾಗಿ ಪ್ರಾಣ ತೆತ್ತ ವೀರ ಪೈಲ್ವಾನ್ ರಂಜಾನ್ ಸಾಬ್ ಪಿಂಜಾರ ಅವರ ಪ್ರತಿಮೆಗೆ ಸಚಿವ ಯು.ಟಿ ಖಾದರ್ ರವರು ಇಂದು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.


ಕುಸ್ತಿಪಟುವಾಗಿ ಬೆಳೆದ ರಂಜಾನ್ ಸಾಬ್, ಬಳ್ಳಾರಿಯನ್ನು ಕರ್ನಾಟಕದಲ್ಲೇ ಉಳಿಸಲು ನಡೆದ ಹೋರಾಟದ ಮುಂಚೂಣಿಯಲ್ಲಿದ್ದರು. ಬಳ್ಳಾರಿ ಜಿಲ್ಲಾ ಕರ್ನಾಟಕ ಕ್ರಿಯಾ ಸಮಿತಿಯ ಮುಖ್ಯ ಸಂಘಟಕರಾಗಿ ಹಳ್ಳಿ ಹಳ್ಳಿಗೆ ಹೋಗಿ ಒಂದು ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿದರು. ಈ ಹೋರಾಟಕ್ಕಾಗಿ ಜೈಲು ವಾಸವನ್ನೂ ಅನುಭವಿಸಿದರು.

1953ರ ಅಕ್ಟೋಬರ್ 1ರಂದು ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರುವ ಸಂಭ್ರಮದ ಕಾರ್ಯಕ್ರಮ ನಡೆಯಬೇಕಿತ್ತು. ಹಿಂದಿನ ರಾತ್ರಿ ಸಮಾರಂಭದ ವೇದಿಕೆಯನ್ನು ಕಾಯುತ್ತಿದ್ದ ಅವರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡ ಅವರು ಅಕ್ಟೋಬರ್ 2ರಂದು ಕೊನೆಯುಸಿರೆಳೆದರು. ಕನ್ನಡ ನಾಡು ಒಂದಾಗುವ ದಿನವೇ ಅವರು ತಮ್ಮ ಪ್ರಾಣವನ್ನು ಅರ್ಪಿಸಿದರು.

ಕನ್ನಡದ ಮೇಲಿನ ಪ್ರೀತಿಗೆ ಜಾತಿ, ಧರ್ಮದ ಗಡಿ ಇಲ್ಲ ಎಂಬುದಕ್ಕೆ ರಂಜಾನ್ ಸಾಬ್ ಅವರ ಬದುಕೇ ಸಾಕ್ಷಿ. ಕನ್ನಡ ರಾಜ್ಯೋತ್ಸವದ ಈ ತಿಂಗಳಲ್ಲಿ ಅವರ ತ್ಯಾಗವನ್ನು ಸ್ಮರಿಸಬೇಕು ಎಂದು ವೀರ ಕನ್ನಡಿಗ ಪೈಲ್ವಾನ್ ರಂಜಾನ್ ಸಾಬ್ ಅವರಿಗೆ ಗೌರವಪೂರ್ವಕ ನಮನಗಳನ್ನು ಸಚಿವ ಯು.ಟಿ ಖಾದರ್ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ನಾರಾ ಭರತ್ ರೆಡ್ಡಿ, ಪಕ್ಷದ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಉಪಸ್ಥಿತರಿದ್ದರು.




