ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಗುತ್ತಿಗಾರು ಗ್ರಾಮದ ತುಪ್ಪದಮನೆಯಲ್ಲಿ ಮನೆಯ ಗಾಡ್ರೇಜ್‌ನಲ್ಲಿದ್ದ ₹7.61 ಲಕ್ಷ ಮೌಲ್ಯದ 69 ಗ್ರಾಂ ಚಿನ್ನಾಭರಣಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುತ್ತಿಗಾರಿನ ನಿವಾಸಿ ರಂಜಿತ್ ರಾಜ್ ಟಿ.ಡಿ. (31) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ರಂಜಿತ್ ರಾಜ್ ಅವರು ಏಪ್ರಿಲ್ 26ರಂದು ವಿವಾಹವಾಗಿದ್ದು, ಮೇ 4ರಂದು ಹೆಂಡತಿಯೊಂದಿಗೆ ಅಬುಧಾಬಿಗೆ ತೆರಳಿದ್ದರು. ತೆರಳುವ ಮುನ್ನ ಹೆಂಡತಿಯ ತವರಿನಿಂದ ನೀಡಲಾಗಿದ್ದ ಚಿನ್ನಾಭರಣ ಹಾಗೂ ₹6,000 ನಗದನ್ನು ಮನೆಯ ಗಾಡ್ರೇಜ್‌ನಲ್ಲಿ ಇಟ್ಟು ಲಾಕ್ ಮಾಡಿ, ಕೀಲಿಕೈಯನ್ನು ತಾಯಿ ಜಾನಕಿ ಅವರಿಗೆ ನೀಡಿದ್ದರು. ನವೆಂಬರ್ 1ರಂದು ರಂಜಿತ್ ರಾಜ್ ಅವರು ಅಬುಧಾಬಿಯಿಂದ ವಾಪಸ್ ಮನೆಗೆ ಬಂದಾಗ ಗಾಡ್ರೇಜ್‌ನ ಬಲಬದಿಯ ಬಾಗಿಲು ತೆರೆದಿತ್ತು. ಈ ಕುರಿತು ಅಣ್ಣ ನಿಶ್ಚಿತ್ ಬಳಿ ವಿಚಾರಿಸಿದಾಗ, “ಕೆಲಸದವರಿಗೆ ಹಣ ಕೊಡಲು ನಾನೇ ಬೀಗ ತೆಗೆದಿದ್ದೆ” ಎಂದು ತಿಳಿಸಿದ್ದರು.

ನವೆಂಬರ್ 2ರಂದು ಮಧ್ಯಾಹ್ನ ತಾಯಿಗೆ ನೀಡಲು ಹಣ ತೆಗೆಯುವ ಸಂದರ್ಭದಲ್ಲಿ ರಂಜಿತ್ ಅವರ ಪತ್ನಿ ಗಾಡ್ರೇಜ್ ಲಾಕರ್ ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಲಾಕರ್‌ನಲ್ಲಿದ್ದ 2 ಬೆಳ್ಳಿ ಬಳೆ, ಉಂಗುರ ಹಾಗೂ ನಗದು ಹಣ ಹಾಗೆಯೇ ಇತ್ತು. ಆದರೆ ಅದರಲ್ಲಿದ್ದ ಚಿನ್ನಾಭರಣಗಳು ಮಾಯವಾಗಿದ್ದವು. ಈ ಬಗ್ಗೆ ಕುಟುಂಬಸ್ಥರಲ್ಲಿ ವಿಚಾರಿಸಿದಾಗ ಯಾರೂ ಚಿನ್ನ ತೆಗೆದಿಲ್ಲ ಎಂದು ತಿಳಿಸಿದ್ದಾರೆ.


ಸುಮಾರು 22 ಗ್ರಾಂ ತೂಕದ 2 ಚಿನ್ನದ ಬಳೆಗಳು (ಮೌಲ್ಯ ₹2,26,000), 25 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಇರುವ ನೆಕ್ಲೇಸ್ (ಮೌಲ್ಯ ₹2,71,000), 10 ಗ್ರಾಂ ತೂಕದ ಒಂದು ಜೊತೆ ಜುಮುಕಿ (ಮೌಲ್ಯ ₹1,20,000) ಹಾಗೂ 12 ಗ್ರಾಂ ತೂಕದ ಚಿನ್ನದ ಚೈನ್ (ಮೌಲ್ಯ ₹1,44,000) ಸೇರಿ ಒಟ್ಟು ₹7,61,000 ಮೌಲ್ಯದ 69 ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯ ಠಾಣೆಯ ಪೊಲೀಸರು (ಅ.ಕ್ರ: 41/2026, ಕಲಂ 305 BNS 2023) ತನಿಖೆ ಚುರುಕುಗೊಳಿಸಿದ್ದಾರೆ.



