ಉಡುಪಿ : ಅಪರಿಚಿತ ವ್ಯಕ್ತಿಗಳು ಮೊಬೈಲ್ ಅಂಗಡಿಗಳಿಗೆ ಮಾರಾಟ ಮಾಡಲು ತಂದಿದ್ದ, ಯಾವುದೇ ಸೂಕ್ತ ದಾಖಲೆಗಳಿಲ್ಲದ ಒಟ್ಟು 7 ಮೊಬೈಲ್ ಫೋನ್ಗಳನ್ನು ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಪದಾಧಿಕಾರಿಗಳು ಬುಧವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಹರಿರಾಂ ಶಂಕರ್ ಅವರಿಗೆ ಹಸ್ತಾಂತರಿಸಿದ್ದಾರೆ.


ಉಡುಪಿಯ ಕೆಲವು ಮೊಬೈಲ್ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರಾಟ ಮಾಡಲು ಬಂದಿದ್ದರು. ಈ ವೇಳೆ ಅಂಗಡಿಯ ಮಾಲೀಕರಿಗೆ ಅವರ ನಡವಳಿಕೆಯ ಮೇಲೆ ಸಂಶಯ ಬಂದಿದೆ. ತಕ್ಷಣವೇ ಜಾಗೃತರಾದ ಮಾಲೀಕರು, ಕೇಂದ್ರ ಸರ್ಕಾರದ ಅಧಿಕೃತ ‘ಸಂಚಾರ ಸಾಥಿ’ (Sanchar Saathi) ಆಪ್ ಮೂಲಕ ಆ ಮೊಬೈಲ್ಗಳ ಐಎಂಇಐ (IMEI) ಸಂಖ್ಯೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆ ಮೊಬೈಲ್ಗಳು ಬ್ಲಾಕ್ಲಿಸ್ಟ್ನಲ್ಲಿ (Blocklisted) ಇರುವುದು ಪತ್ತೆಯಾಗಿದೆ. ಈ ಬಗ್ಗೆ ಅಂಗಡಿ ಮಾಲೀಕರು ಫೋನ್ಗಳ ಬಿಲ್ ಅಥವಾ ಸೂಕ್ತ ದಾಖಲೆಗಳನ್ನು ಕೇಳಿದಾಗ, ಮಾರಾಟಕ್ಕೆ ತಂದವರು ಯಾವುದೇ ದಾಖಲೆ ನೀಡದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅನುಮಾನಾಸ್ಪದವಾಗಿದ್ದ ಇಂತಹ ಒಟ್ಟು ಏಳು ಮೊಬೈಲ್ಗಳನ್ನು ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಹಾಗೂ ಸದಸ್ಯರಾದ ರಂಜಿತ್ ಶೆಟ್ಟಿ, ಸಂದೇಶ್, ಸುದರ್ಶನ್, ಗಣೇಶ್ ಮತ್ತು ಅಭಿಷೇಕ್ ಅವರು ಜಿಲ್ಲಾ ಪೊಲೀಸ್ ಕಚೇರಿಗೆ ತಂದು ಎಸ್ಪಿ ಹರಿರಾಂ ಶಂಕರ್ ಅವರಿಗೆ ಒಪ್ಪಿಸಿದ್ದಾರೆ. ಈ ಮೊಬೈಲ್ಗಳ ಮೂಲ ಮಾಲೀಕರನ್ನು ಸಿಇಐಆರ್ (CEIR Portal) ಪೋರ್ಟಲ್ ಮೂಲಕ ಪತ್ತೆಹಚ್ಚಿ, ಕಾನೂನು ಪ್ರಕ್ರಿಯೆ ಮುಗಿಸಿ ವಾರಸುದಾರರಿಗೆ ಮರಳಿ ಹಸ್ತಾಂತರಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಮೊಬೈಲ್ ಅಂಗಡಿ ಮಾಲೀಕರಿಗೆ ಎಸ್ಪಿಯವರ ಪ್ರಮುಖ ಸೂಚನೆಗಳು:
ಅಪರಿಚಿತರು ಮೊಬೈಲ್ ಮಾರಾಟಕ್ಕೆ ತಂದಾಗ ಮೊದಲು ‘ಸಂಚಾರ ಸಾಥಿ’ ಆಪ್ನಲ್ಲಿ ಕಡ್ಡಾಯವಾಗಿ ಚೆಕ್ ಮಾಡಬೇಕು.
ಫೋನ್ ಪರಿಶೀಲಿಸುವಾಗ ಅಂಗಡಿ ಮಾಲೀಕರು ತಮ್ಮ ಸ್ವಂತ ಸಿಮ್ ಕಾರ್ಡ್ ಬಳಸಬಾರದು. ಬದಲಿಗೆ, ಮೊಬೈಲ್ ತಂದ ಗ್ರಾಹಕರ ಸಿಮ್ ಕಾರ್ಡ್ ಅನ್ನೇ ಬಳಸಬೇಕು.
ಬಿಲ್ ಅಥವಾ ಸೂಕ್ತ ದಾಖಲೆಗಳಿಲ್ಲದ ಮೊಬೈಲ್ಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು.
ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.


