ಬೈಕ್ ನಲ್ಲೇ 38 ದೇಶಗಳಿಗೆ ಪ್ರವಾಸ ಕೈಗೊಳ್ಳಲಿರುವ ಮಂಗಳೂರಿನ ಶರತ್ ಎಕ್ಕೂರು

Prakhara News
2 Min Read

ಮಂಗಳೂರು: ಮಂಗಳೂರಿನ ಬೈಕ್‌ ರೈಡರ್‌ ಒರ್ವರು ತಮ್ಮ 60ನೇ ವಯಸ್ಸಿನಲ್ಲಿ ಯುರೋಪಿಯನ್‌ ಮತ್ತು ಗಲ್ಫ್‌ನ ಸುಮಾರು 38 ದೇಶಗಳಿಗೆ ಬೈಕ್‌ನಲ್ಲಿ ಸುತ್ತಾಟಕ್ಕೆ ಸಿದ್ಧತೆ ನಡೆಸಿದ್ದು, ಇದು ಅವರ ಬೈಕ್‌ನಲ್ಲಿ ಎರಡನೇ ಪ್ರವಾಸವಾಗಿದೆ.
ಮಂಗಳೂರಿನ ಉದ್ಯಮಿ ಶರತ್‌ ಎಕ್ಕೂರು ಅವರು ಇದೀಗ ತಮ್ಮ ಬೈಕ್‌ನಲ್ಲಿ ವಿದೇಶ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದು, ಮೇ 31ರಂದು ಮಂಗಳೂರಿನಿಂದ ತಮ್ಮ ಪ್ರಯಾಣ ಆರಂಭಿಸಲಿದ್ದು, ಮುಂದಿನ 5-6 ತಿಂಗಳ ವರೆಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ಶರತ್‌ ಎಕ್ಕೂರು ಅವರು ತಮ್ಮ ರೋಯಲ್‌ ಎನ್‌ಫೀಲ್ಡ್‌ ಸೂಪರ್‌ ಮಿಟಿವ್ಯೂರ್‌ 650 (Royal Enfield Super Meteor 650) ಬುಲೆಟ್‌ ಬೈಕ್‌ನಲ್ಲಿ ಮೇ 31ರಂದು ಬೆಳಗ್ಗೆ ಮಂಗಳೂರಿನ ಶಾಂತಿ ಕೆಥಡ್ರಿಯಲ್‌ ಚರ್ಚ್‌ ಬಳಿಯಿಂದ ಬೈಕ್‌ ಜರ್ನಿ ಆರಂಭಿಸಲಿದ್ದಾರೆ.

ಬೆಂಗಳೂರು, ಹೈದರಾಬಾದ್‌, ಮಧ್ಯಪ್ರದೇಶ, ಉತ್ತರಪ್ರದೇಶದ ಮೂಲಕ ನೇಪಾಳ ಪ್ರವೇಶಿಸಿ ವಿದೇಶ ಪ್ರವಾಸ ಆರಂಭವಾಗಲಿದೆ. ಅಲ್ಲಿಂದ ಟಿಬೇಟ್‌, ಚೈನಾ, ಕಜಕಿಸ್ಥಾನ್‌, ಉರುಬಿಸ್ಥಾನ್‌, ರಷ್ಯಾ, ಇರಾನ್‌, ಇರಾಕ್‌, ಸೌಧಿ, ಸೇರಿದಂತೆ ಯುರೋಪಿಯನ್‌ನ ಆಸ್ಟ್ರೀಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ರೊಯೇಷಿಯಾ, ಸೈಪ್ರಸ್‌, ಜೆಕ್‌ ರಿಪಬ್ಲಿಕ್‌, ಡೆನ್ಮಾರ್ಕ್‌, ಎಸ್ಟೋನಿಯಾ, ಫಿನ್‌ಲ್ಯಾಂಡ್‌, ಫ್ರಾನ್ಸ್‌, ಜರ್ಮನಿ, ಗ್ರೀಸ್‌, ಹಂಗೇರಿ, ಐರ್ಲೇಂಡ್‌, ಇಟಲಿ, ಲಾಟ್ವಿಯಾ, ಲಿಥುವೇನಿಯಾ, ಲಕ್ಸೇಂಬರ್ಗ್‌, ಮಾಲ್ಟಾ, ನೆದರ್ಲ್ಯಾಂಡ್ಸ್‌, ಪೋಲೆಂಡ್‌, ಪೋರ್ಚುಗಲ್‌, ರೊಮೇನಿಯಾ, ಸ್ಲೊವೇನಿಯಾ, ಸ್ಪೇನ್‌, ಸ್ವೀಡನ್‌, ಸ್ವಟ್ಜರ್ಲ್ಯಾಂಡ್‌, ನಾರ್ವೆ, ಟರ್ಕಿ ಮೊದಲಾದ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರತೀ ದಿನದ 500 ಕಿ.ಮೀ. ದೂರದ ಪ್ರಯಾಣ ನಡೆಸಲು ಉದ್ದೇಶಿರುವ ಶರತ್‌ ಅವರು ತಮ್ಮ ಒಟ್ಟು ಪ್ರವಾಸದಲ್ಲಿ 35ರಿಂದ 40 ಸಾವಿರ ಕಿ.ಮೀ. ದೂರದವರೆಗೆ ಸುತ್ತಾಟ ನಡೆಸಲಿದ್ದಾರೆ. ತಮ್ಮ ಬೈಕ್‌ನಲ್ಲಿ ಭಾರತದ ಧ್ವಜ ಹಾಗೂ ತುಳುನಾಡಿನ ಧ್ವಜದೊಂದಿಗೆ ಪ್ರವಾಸ ಕೈಗೊಳ್ಳುವರು. ಬೈಕ್‌ನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಕೆಲವೇ ಹಿರಿಯ ರೈಡರ್‌ಗಳಲ್ಲಿ ಶರತ್‌ ಅವರೂ ಗುರುತಿಸಿಕೊಳ್ಳುವ ನಿರೀಕ್ಷೆ ಇದೆ.

ಚೈನಾದಲ್ಲಿ ಅಲ್ಲಿನ ಟೂರ್‌ ಗೈಡ್‌ ನೆರವು ಪಡೆಯಲಿದ್ದಾರೆ. ಸಾಧ್ಯವಾದರೆ ಅಫಘಾನಿಸ್ತಾನಕ್ಕೂ ಭೇಟಿ ನೀಡಲಿರುವ ಶರತ್‌ ಅವರು ಒಮನ್‌ನಲ್ಲಿ ತಮ್ಮ ಪ್ರವಾಸ ಕೊನೆಗೊಳಿಸಲಿದ್ದು, ಅಲ್ಲಿಂದ ಹಡಗಿನಲ್ಲಿ ಭಾರತಕ್ಕೆ ಹಿಂದಿರುಗಲಿದ್ದಾರೆ.

ಈ ಹಿಂದೆಯೂ ವಿದೇಶಕ್ಕೆ ಬೈಕ್‌ ರೈಡ್‌:
ಶರತ್‌ ಅವರು 2024ರಲ್ಲೂ ಮಂಗಳೂರಿನಿಂದ ಗಲ್ಫ್ ದೇಶಗಳಿಗೆ ತಮ್ಮ ಬುಲೆಟ್‌ ಬೈಕ್‌ನಲ್ಲಿ ಪ್ರವಾಸ ಕೈಗೊಂಡಿದ್ದರು. ಅಂದು ಮುಂಬಾಯಿಂದ ದುಬೈಗೆ ಬೈಕ್‌ನ್ನು ಹಡಗಿನಲ್ಲಿ ಶಿಫ್ಟ್‌ ಮಾಡಿ ಪ್ರವಾಸ ಕೈಗೊಂಡಿದ್ದರು. ‘ಸೇ ನೋ ಟು ಡ್ರಗ್ಸ್‌’ ಘೋಷಣೆಯೊಂದಿಗೆ ಪ್ರವಾಸ ಕೈಗೊಂಡಿದ್ದರು.

Share This Article
Leave a Comment