ಕೊಚ್ಚಿ: ನಟಿ ಹಾಗೂ ಅವರ ಸಹಚರರು ತನ್ನ ಮೇಲೆ ಹಲ್ಲೆ ನಡೆಸಿ ಫೋನ್ ದೋಚಿದ್ದಾರೆ ಎಂದು ದೂರು ನೀಡಿದ್ದ ವೈದ್ಯ ಡಾ. ಜಾನ್ಸನ್ ಕೆ. ವರ್ಗೀಸ್ ಅವರ ಮೊಬೈಲ್ ಫೋನ್ನಲ್ಲಿ ಡಜನ್ಗೂ ಹೆಚ್ಚು ಮಹಿಳೆಯರ ಖಾಸಗಿ ದೃಶ್ಯಗಳು ಪತ್ತೆಯಾಗಿರುವ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ವೈದ್ಯನ ಬಂಧನಕ್ಕಾಗಿ ಇನ್ಫೋಪಾರ್ಕ್ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.


ಮತ್ತೊಂದೆಡೆ, ವೈದ್ಯನಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ರಿಮಾಂಡ್ಗೆ ಒಳಗಾಗಿದ್ದ ನಟಿ ಹಾಗೂ ಅವರ ಸ್ನೇಹಿತರ ಜಾಮೀನು ಅರ್ಜಿಯನ್ನು ಎರ್ನಾಕುಲಂ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ಕಡವಂತ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಡಾ. ಜಾನ್ಸನ್, ನಟಿಯ ಕರೆಯ ಮೇರೆಗೆ ಸೋಮವಾರ ಸಂಜೆ ಫ್ಲಾಟ್ಗೆ ತೆರಳಿದ್ದಾಗ ಆಕೆ ಹಾಗೂ ಆಕೆಯ ಸಹಚರರು ತನ್ನ ಮೇಲೆ ಹಲ್ಲೆ ನಡೆಸಿ, ₹3.5 ಲಕ್ಷ ಮೌಲ್ಯದ ಫೋನ್ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಪೊಲೀಸರು ನಟಿಯ ಸಂಬಂಧಿಯನ್ನು ವಿಚಾರಿಸಿದಾಗ ಘಟನೆಯ ನಿಜ ಬಣ್ಣ ಬಯಲಾಗಿದೆ.

ಕುಟುಂಬ ವೈದ್ಯರೂ ಆಗಿದ್ದ ಡಾ. ಜಾನ್ಸನ್ ಅಕ್ಟೋಬರ್ ಆರಂಭದಲ್ಲಿ ನಟಿಯ ಸಂಬಂಧಿಗೆ ಮದ್ಯ ನೀಡಿ ಹೋಟೆಲ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. ಘಟನೆಯ ಫೋಟೊ/ವಿಡಿಯೊಗಳನ್ನು ವೈದ್ಯ ಚಿತ್ರೀಕರಿಸಿರಬಹುದು ಎಂಬ ಭೀತಿಯಿಂದ ಸಂತ್ರಸ್ತೆ ದೂರು ನೀಡಲು ಹಿಂಜರಿದಿದ್ದರು. ಈ ವಿಷಯ ತಿಳಿದ ನಟಿ, ವೈದ್ಯನನ್ನು ಫ್ಲಾಟ್ಗೆ ಕರೆಸಿ ಆತನ ಬಳಿಯಿದ್ದ ಫೋನ್ ವಶಕ್ಕೆ ಪಡೆದು ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ವೈದ್ಯನಿಗೆ ತೀವ್ರವಾಗಿ ಹಲ್ಲೆ ನಡೆಸಲಾಗಿತ್ತು. ಫೋನ್ನಲ್ಲಿದ್ದ ಖಾಸಗಿ ಮಾಹಿತಿ ಸೋರಿಕೆಯಾಗಬಹುದು ಎಂಬ ಭಯದಿಂದ ವೈದ್ಯ ಡಾ. ಜಾನ್ಸನ್ ಪೊಲೀಸರಿಗೆ ದೂರು ನೀಡಿದ್ದರು.




ನಟಿಯ ಸಂಬಂಧಿ ಪೊಲೀಸರಿಗೆ ಹಸ್ತಾಂತರಿಸಿದ ವೈದ್ಯನ ಫೋನ್ ಅನ್ನು ಪರಿಶೀಲಿಸಿದಾಗ, ಸುಮಾರು 12ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ಕ್ಷಣಗಳ ದೃಶ್ಯಾವಳಿಗಳು ಪತ್ತೆಯಾಗಿವೆ. ಈ ದೃಶ್ಯಗಳನ್ನು ಬಳಸಿ ವೈದ್ಯ ಯಾರನ್ನಾದರೂ ಬ್ಲ್ಯಾಕ್ಮೇಲ್ ಮಾಡಿದ್ದಾನೆಯೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಧಿತ ಮಹಿಳೆಯರು ದೂರು ನೀಡಿದರೆ ಪ್ರತ್ಯೇಕ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ತಮ್ಮ ಮೇಲಿನ ಅತ್ಯಾಚಾರ ಆರೋಪ ಹಾಗೂ ಸಂತ್ರಸ್ತೆಯ ದೂರಿನ ಬೆನ್ನಲ್ಲೇ ಡಾ. ಜಾನ್ಸನ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.


