ಕುಂದಾಪುರ: ಯುಎಇಯ ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಗೀಡಾಗಿದ್ದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶುಕ್ರವಾರ ಬೆಳಿಗ್ಗೆ ಹುಟ್ಟೂರಿಗೆ ಆಗಮಿಸಿದ್ದು, ಕುಂದಾಪುರದ ಸಿಎಸ್‌ಐ ಸಮುದಾಯದ ಸ್ಮಶಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.


ಶುಕ್ರವಾರ ಬೆಳಗಿನ ಜಾವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಕಾಶ್ ಅವರ ಮೃತದೇಹವನ್ನು ಕುಟುಂಬಸ್ಥರು ಹಾಗೂ ಸಂಬಂಧಿಕರು ವಿಶೇಷ ಆಂಬುಲೆನ್ಸ್ ಮೂಲಕ ಕುಂದಾಪುರದ ಹೊನ್ನನಕೇರಿಯಲ್ಲಿರುವ ಅವರ ಮನೆಗೆ ತಂದರು. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಂದಾಪುರದ ಸಿಎಸ್‌ಐ ಕೃಪಾ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಇಮಾನ್ಯುವೆಲ್ ಜಯಕರ್ ಅವರು ಅಂತಿಮ ವಿಧಿಯ ಪ್ರಾರ್ಥನೆ ಹಾಗೂ ಧಾರ್ಮಿಕ ಪ್ರಕ್ರಿಯೆಗಳನ್ನು ನೆರವೇರಿಸಿಕೊಟ್ಟರು.
ಬಳಿಕ ಪಾರ್ಥಿವ ಶರೀರವನ್ನು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇರುವ ಸಿಎಸ್‌ಐ ಸಮುದಾಯದ ರುದ್ರಭೂಮಿಗೆ ಮೆರವಣಿಗೆಯಲ್ಲಿ ಒಯ್ದು, ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬಾಂಧವರ ಕಣ್ಣೀರಿನ ನಡುವೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಗಣ್ಯರು ಆಗಮಿಸಿದ್ದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ ಸೇರಿದಂತೆ ಮೃತರ ಸಹೋದರ ಪ್ರಶಾಂತ್ ಕುಂದರ್, ಅಕ್ಕ ಅನಿತಾ, ಕುಟುಂಬಸ್ಥರು ಹಾಗೂ ಸ್ನೇಹಿತರು ಅಂತಿಮ ನಮನ ಸಲ್ಲಿಸಿದರು.

