ಬಂಟ್ವಾಳ : ಬಂಟ್ವಾಳ ಕಸಬಾ ಗ್ರಾಮದ ಕೆಮ್ಮಟ್ಟೆ ಗುಡ್ಡೆಯಲ್ಲಿ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೆಮ್ಮಟ್ಟೆ ಗುಡ್ಡೆ ನಿವಾಸಿ ಕಮಲಾ (74) ಎಂದು ಗುರುತಿಸಲಾಗಿದೆ.


ಕಮಲಾ ಅವರು ಸೆ.23ರಂದು ಬೆಳಗ್ಗೆ ಮನೆಯ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಹುಲ್ಲು ತೆಗೆಯಲು ಹಾಗೂ ಕೃಷಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಹೆಜ್ಜೆನುಗಳು ಅವರ ಬೆನ್ನು, ಕಾಲು, ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಕಚ್ಚಿವೆ. ಬಳಿಕ ಸುಮಾರು 11 ಗಂಟೆಗೆ ಮನೆಗೆ ಬಂದ ಅವರು ಘಟನೆ ಕುರಿತು ಪುತ್ರ ದಿನೇಶ್ ಅವರಿಗೆ ತಿಳಿಸಿದ್ದಾರೆ.
ತಕ್ಷಣ ದಿನೇಶ್ ಅವರು ಕಮಲಾ ಅವರನ್ನು ಬಂಟ್ವಾಳದ ಕ್ಲಿನಿಕ್ ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬಳಿಕ ಮನೆಗೆ ಕರೆತಂದಿದ್ದರು. ಮಧ್ಯಾಹ್ನ ಕಮಲಾ ಅವರು ಮಾತನಾಡದೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಂಬುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿ, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ದಿನೇಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


