ಮಂಗಳೂರು: ಬ್ಯಾಂಕ್ ಖಾತೆ ತೆರೆದುಕೊಟ್ಟರೆ ಹಣ ನೀಡುವುದಾಗಿ ನಂಬಿಸಿ ಯುವಕನೋರ್ವನ ಖಾತೆಯನ್ನು ಸೈಬರ್ ವಂಚನೆಯ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಬಳಸಿಕೊಂಡ ಘಟನೆ ಸುರತ್ಕಲ್ನಲ್ಲಿ ಬೆಳಕಿಗೆ ಬಂದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕ ತನ್ನ ಸ್ನೇಹಿತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸುರತ್ಕಲ್ನ ಕೃಷ್ಣಪುರ ನಿವಾಸಿ 21 ವರ್ಷದ ಯುವಕರೊಬ್ಬರು ನೀಡಿದ ದೂರಿನಂತೆ, ಕೃಷ್ಣಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಮ್ರಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

2025ರಲ್ಲಿ ದೂರುದಾರ ಯುವಕನಿಗೆ ಕೃಷ್ಣಪುರದಲ್ಲಿ ಮೊಹಮ್ಮದ್ ಹಮ್ರಾಜ್ನ ಪರಿಚಯವಾಗಿ, ಇಬ್ಬರೂ ಸ್ನೇಹಿತರಾಗಿದ್ದರು. ಮೇ 2025ರಲ್ಲಿ ಹಮ್ರಾಜ್, “ನನಗೆ ಟ್ರೇಡಿಂಗ್ ಮಾಡಲು ಹಣ ವರ್ಗಾವಣೆ ಮತ್ತು ಡ್ರಾ ಮಾಡಲು ಬ್ಯಾಂಕ್ ಖಾತೆಯ ಅಗತ್ಯವಿದೆ. ನೀನು ಖಾತೆ ತೆರೆದುಕೊಟ್ಟರೆ ₹4,000 ನೀಡುತ್ತೇನೆ” ಎಂದು ನಂಬಿಸಿದ್ದ. ಸ್ನೇಹಿತನ ಮಾತು ನಂಬಿದ ಯುವಕ, ಏಪ್ರಿಲ್ನಲ್ಲಿ ತಮ್ಮ ಕೆವೈಸಿ (KYC) ದಾಖಲೆಗಳನ್ನು ನೀಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಖಾತೆ ತೆರೆದಿದ್ದರು. ಬಳಿಕ ಖಾತೆಯ ಪಾಸ್ಬುಕ್ ಹಾಗೂ ಸಹಿ ಮಾಡಿದ ಚೆಕ್ಗಳನ್ನು ಬ್ಯಾಂಕ್ ಮುಂಭಾಗದಲ್ಲೇ ಹಮ್ರಾಜ್ಗೆ ಹಸ್ತಾಂತರಿಸಿದ್ದರು.

ಈ ಖಾತೆಯ ಮೂಲಕ 2025ರ ಮೇ 14ರಂದು ₹4,10,000 ಹಾಗೂ 2026ರ ಮೇ 20ರಂದು ₹4,53,000 ಸೇರಿದಂತೆ ಒಟ್ಟು ₹8,63,000 ನಗದು ವಹಿವಾಟು ನಡೆಸಲಾಗಿತ್ತು. ಆದರೆ, ಮಾತುಕೊಟ್ಟಂತೆ ಹಮ್ರಾಜ್ ಯುವಕನಿಗೆ ₹4,000 ಹಣವನ್ನು ನೀಡದೆ ವಂಚಿಸಿದ್ದ.

ಬಳಿಕ ಯುವಕ ಹಮ್ರಾಜ್ನೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಇತ್ತೀಚೆಗೆ ತಮ್ಮ ಬ್ಯಾಂಕ್ ಖಾತೆಯ ಮೇಲೆ ಸಾಲು ಸಾಲು ಆನ್ಲೈನ್ ದೂರುಗಳು ದಾಖಲಾಗಿರುವ ವಿಷಯ ತಿಳಿದು ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಸೈಬರ್ ವಂಚನೆಯಿಂದ ದೋಚಲಾದ ಹಣವನ್ನು ಈ ಯುವಕನ ಖಾತೆಗೆ ವರ್ಗಾಯಿಸಿ, ಬಳಿಕ ಚೆಕ್ ಮೂಲಕ ಡ್ರಾ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಸೈಬರ್ ದೂರುಗಳು ದಾಖಲಾಗಿ, ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿರುವುದು ತಿಳಿದುಬಂದಿದೆ. ತಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ವಂಚನೆ ಎಸಗಿರುವ ಮೊಹಮ್ಮದ್ ಹಮ್ರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಯುವಕ ದೂರಿನಲ್ಲಿ ಒತ್ತಾಯಿಸಿದ್ದಾರೆ.



