ನಟಿ ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೊ ವೈರಲ್ ಪ್ರಕರಣ: ಮೂವರು ಅರೆಸ್ಟ್

Prakhara News
1 Min Read

ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟಿ ರುಕ್ಮಿಣಿ ವಸಂತ್ ಅವರ ಮುಖವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ದುರುಪಯೋಗಪಡಿಸಿಕೊಂಡು, ಅಶ್ಲೀಲ ಡೀಪ್‌ಫೇಕ್ ವೀಡಿಯೊ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಮೂವರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರನ್ನು ಬಾಗಲಕೋಟೆ ಜಿಲ್ಲೆಯ ಚಿಲಕಮುಖಿ ಗ್ರಾಮದ ರವಿಕುಮಾರ್ (24), ಶಿವಮೊಗ್ಗ ಮೂಲದ (ಪ್ರಸ್ತುತ ಬೆಂಗಳೂರು ನಿವಾಸಿ) ಚಂದ್ರಕಾಂತ್ (33) ಹಾಗೂ ಬೆಂಗಳೂರಿನ ರಂಜಿತ್ (25) ಎಂದು ಗುರುತಿಸಲಾಗಿದೆ.

ನಟಿಯ ಗೌರವಕ್ಕೆ ಧಕ್ಕೆ ತಂದಿದ್ದ ವೀಡಿಯೊ: ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳಲ್ಲಿ ನಟಿ ರುಕ್ಮಿಣಿ ವಸಂತ್ ಅವರು ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್‌ನಿಂದ ಹೊರಬರುತ್ತಿರುವ ಮಾದರಿಯ ವೀಡಿಯೊವೊಂದು ವ್ಯಾಪಕವಾಗಿ ಹರಿದಾಡಿತ್ತು. ಆದರೆ, ಇದು ನೈಜ ವೀಡಿಯೊ ಆಗಿರದೆ, ಬೇರೊಬ್ಬರ ವೀಡಿಯೊಗೆ ನಟಿಯ ಮುಖವನ್ನು ‘ಡೀಪ್‌ಫೇಕ್’ ತಂತ್ರಜ್ಞಾನದ ಮೂಲಕ ಜೋಡಿಸಿ ಎಡಿಟ್ ಮಾಡಲಾಗಿತ್ತು. ಇದರಿಂದ ತೀವ್ರ ಬೇಸರಗೊಂಡಿದ್ದ ನಟಿ, ತಮ್ಮ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಿಶೇಷ ತಂಡದಿಂದ ಭೇಟೆ: ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಸಂಗ್ರಹಿಸಿದ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಸೈಬರ್ ಕಮಾಂಡ್‌ನ ಸಿಐಡಿ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ತಿಳಿಸಿದ್ದಾರೆ. ಅಪರಾಧಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Share This Article
Leave a Comment