ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿನಲ್ಲಿ ಕೆಆರ್‌ಐಡಿಎಎಲ್‌ ಇಂಜಿನಿಯರ್‌ಗಳು ಲಂಚ ಕೇಳಿದ ಆರೋಪ : ಸೂಕ್ತ ತನಿಖೆಗೆ ಸಿಎಂಗೆ ಸಚಿವ ಖಾದರ್ ಮನವಿ

Prakhara News
1 Min Read

ಮಂಗಳೂರು: ಕೆಆರ್‌ಐಡಿಎಎಲ್ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್ ಹಾಗೂ ಕಿರಿಯ ಇಂಜಿನಿಯರ್ ಪ್ರಜ್ವಲ್ ಅವರು ಸಚಿವರ ಹೆಸರು ಹೇಳಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇಬ್ಬರನ್ನೂ ತಕ್ಷಣವೇ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಸಂಸ್ಥೆಯ ವತಿಯಿಂದ ನಿರ್ವಹಿಸಲಾಗುತ್ತಿರುವ ಸರ್ಕಾರಿ ಕಾಮಗಾರಿಗಳಿಗೆ ಸಾಮಗ್ರಿ ಪೂರೈಸುವ ಗ್ರೂಪ್ ಲೀಡರ್‌ಗಳಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇಲಾಖಾ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲುಪಿಸುವುದಕ್ಕಾಗಿ ಹಣ ನೀಡಬೇಕೆಂದು ಈ ಇಬ್ಬರು ಇಂಜಿನಿಯರ್‌ಗಳು ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ ಎನ್ನಲಾಗಿದೆ.

ಈ ಗಂಭೀರ ವಿಚಾರವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರಸ್ತಾಪಿಸಿದ್ದು, ಸಚಿವರ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಹಣ ಕೇಳುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಯು.ಟಿ.ಖಾದರ್, “ಇಂಜಿನಿಯರ್‌ಗಳ ಮೇಲಿನ ಆರೋಪ ತೀವ್ರ ಸ್ವರೂಪದ್ದಾಗಿದೆ. ಆಡಳಿತ ಯಂತ್ರದ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ಅಗತ್ಯ. ಹಾಗಾಗಿ ತಕ್ಷಣವೇ ಈ ಇಬ್ಬರು ಇಂಜಿನಿಯರ್‌ಗಳನ್ನು ಸೇವೆಯಿಂದ ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು. ತನಿಖೆಯಲ್ಲಿ ಆರೋಪ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.

Share This Article
Leave a Comment