ಮಂಗಳೂರು: ಎಸ್.ಐ.ಆರ್ ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ ದೇಶಾದ್ಯಂತ ಅರಾಜಕತೆ ಸೃಷ್ಟಿಸುವುದು, ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಕೂರುವ ಬದಲು ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ಎಎಸ್ಡಿಡಿ ಆಗಿರುವ (Absent, Shifted, Dead, Duplicate) 99 ಲಕ್ಷ ಮತಗಳಲ್ಲಿ ಕೇವಲ 9 ಲಕ್ಷ ಜನರನ್ನು ಕರೆತಂದು ಕ್ರಮ ಬದ್ಧವಾಗಿ ಅರ್ಜಿ ಹಾಕಿಸಲಿ ಎಂದು ಸವಾಲು ಹಾಕುತ್ತೇನೆ. ಅದರಲ್ಲೂ ನನ್ನ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ನ್ಯಾಯಯುತವಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಮೇಲೆಯೂ ಯಾವುದೇ ಜಾತಿ ಮತ ಧರ್ಮದ ಒಬ್ಬೇ ಒಬ್ಬ ಮತದಾರನ ಹೆಸರು ಅಕ್ರಮವಾಗಿ ಡಿಲೀಟ್ ಆಗಿದ್ದರೆ ದಾಖಲೆಗಳ ಸಮೇತ ಅವರನ್ನು ಕರೆದುಕೊಂಡು ಬನ್ನಿ. ಅಂತಹ ಒಂದೂ ಪ್ರಕರಣ ಇಲ್ಲದಿದ್ದರೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಕಾಂಗ್ರೆಸ್ಸಿಗರು ಬಹಿರಂಗವಾಗಿ ಕ್ಷಮೆ ಕೇಳಬೇಕು.


ಮಾನ್ಯ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಸಮರ್ಥವಾಗಿ ಎದುರಿಸಲಾಗದೇ, ಜನರ ವಿಶ್ವಾಸ ಗಳಿಸಲಾಗದೇ ಹತಾಶರಾಗಿ ಅಂತಿಮವಾಗಿ ಚುನಾವಣಾ ಆಯೋಗ ಸರಿ ಇಲ್ಲ, ಎಸ್ಐಆರ್ ಪ್ರಕ್ರಿಯೆ ಸರಿಯಿಲ್ಲ ಎಂದು ಪ್ರತಿಭಟನೆ ಹೆಸರಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವಾಗುತ್ತಿದೆ. ಇದರ ಹಿಂದೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಫ್ರಾನ್ಸ್, ಯುರೋಪ್ ನಂತಹ ದೇಶಗಳಲ್ಲಿ ನಡೆದ ಹಿಂಸಾಚಾರದ ಮಾದರಿಯ ನೆರಳು ಇರುವುದು ಸ್ಪಷ್ಟವಾಗುತ್ತಿದೆ.

ಎಸ್ಐಆರ್ ಎಂಬುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದಲ್ಲ. ದೇಶದಲ್ಲಿ ಈಗಾಗಲೇ ಹನ್ನೆರಡು ಬಾರಿ ಈ ಪ್ರಕ್ರಿಯೆ ಆಗಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು, ಎರಡು ಕಡೆ ಮತವಿದ್ದವರು ಹೀಗೆ ವಿವಿಧ ಕಾರಣಗಳನ್ನು ನೀಡಿ ಮತಪಟ್ಟಿಯಲ್ಲಿ ಹೆಸರು ತೆಗೆಯಲಾಗುತ್ತಿದ್ದು, ಸಂವಿಧಾನದ ನಿಯಮಗಳ ಅನ್ವಯ ಕಾನೂನುಬದ್ಧವಾಗಿಯೇ ಎಸ್ಐಆರ್ ನಡೆಯುತ್ತಿದೆ. ನೆಹರು, ಇಂದಿರಾ ಗಾಂಧಿ, ಸೋನಿಯಾರವರ ಕಾಲದಲ್ಲಿ ಎಸ್ಐಆರ್ ನಡೆದರೆ ಓಕೆ. ಬಿಜೆಪಿ ಅಧಿಕಾರದಲ್ಲಿ ನಡೆದರೆ ಸರಿಯಲ್ಲ.! ಇದು ಕಾಂಗ್ರೆಸ್ಸಿನ ಮನಸ್ಥಿತಿ.

ಎಸ್ಐಆರ್ ಅನ್ನು ಕೇಂದ್ರದ ಇಲಾಖೆಗಳು ಮಾಡುವುದಲ್ಲ. ರಾಜ್ಯ ಸರ್ಕಾರದ ಕಂದಾಯ, ಶಿಕ್ಷಣ ಮುಂತಾದ ಇಲಾಖೆಗಳ ನೌಕರರು ಹೀಗೆ ಶೇ 99 ರಷ್ಟು ಕೆಲಸವನ್ನು ರಾಜ್ಯ ಸರ್ಕಾರದ ಅಧೀನದ ಇಲಾಖೆಗಳ ಅಧಿಕಾರಿಗಳೇ ಮಾಡುತ್ತಾರೆ. ಇದರ ನಡುವೆ ಸರ್ವ ಪಕ್ಷಗಳ ಬಿಎಲ್ಎ 1, ಹಾಗೂ ಬಿಎಲ್ಎ 2 ಗಳ ಉಪಸ್ಥಿತಿ ಅಥವಾ ಒಪ್ಪಿಗೆಯಿಂದಲೇ ಎಲ್ಲಾ ಪ್ರಕ್ರಿಯೆಗಳು ನಡೆಯುವುದರಿಂದ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತದೆ. ಆದರೆ ಇಲ್ಲಿ ಕಾಂಗ್ರೆಸ್ ಸರ್ಕಾರ ಆಪಾದನೆ ಮಾಡುವುದು ಕೇಂದ್ರ ಸರ್ಕಾರದ ಮೇಲೆ ಎನ್ನುವುದು ಹಾಸ್ಯಾಸ್ಪದ. ಈ ಪ್ರಕ್ರಿಯೆಯಲ್ಲಿ ಬಹಳ ಒತ್ತಡವಿದ್ದರೂ ರಾಜ್ಯದ ಸರ್ಕಾರದ ಅಡಿಯಲ್ಲಿ ಬರುವ ಬಿಎಲ್ಒ ಗಳಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಅತ್ಯಂತ ಶ್ರಮದಿಂದ ಕಾರ್ಯ ನಿರ್ವಹಿಸಿದ್ದಾರೆ. ಈಗ ಅವರೆಲ್ಲರ ಕೆಲಸಕ್ಕೆ ಬೆಲೆಯೇ ಇಲ್ಲ, ಅವರ ಮೇಲೆ ನಂಬಿಕೆಯೇ ಇಲ್ಲ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ಸಿಗರು ಆರೋಪ ಮಾಡುತ್ತಿರುವುದು ಬೇಸರದ ಸಂಗತಿ.

ಕಾಂಗ್ರೆಸ್ ನಾಯಕರಿಗೆ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಹಿಮಾಚಲಪ್ರದೇಶ ರಾಜ್ಯಗಳನ್ನು ಗೆದ್ದಾಗ ಎಲ್ಲವೂ ಸರಿ ಇತ್ತಾ? ಇಲ್ಲೆಲ್ಲಾ ಬಿಜೆಪಿ ಅಲ್ಲಿ ಸೋತಿದ್ದರೂ ಜನತೆಯ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಹೊರತು ಚುನಾವಣಾ ಆಯೋಗ ಸರಿ ಇಲ್ಲ ಎಂದು ಬಾಲಿಶ ಹೇಳಿಕೆ ನೀಡಿಲ್ಲ. ಕೇರಳದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆದಿದ್ದರಿಂದಲೇ ನಾವು ಅಧಿಕಾರಕ್ಕೆ ಬಂದಿದ್ದು ಎಂದು ಅಲ್ಲಿನ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಸರಿಯಾಗಿ ನಡೆದಿದೆ ಎಂದು ಸ್ವತಃ ಸಚಿವ ಸತೀಶ್ ಜಾರಕಿಹೊಳಿಯವರು ಒಪ್ಪಿ ಕೊಂಡಿದ್ದಾರೆ. ಆ ನಂತರ ಕಾಂಗ್ರೆಸ್ ಅವರಿಂದ ಬಲವಂತವಾಗಿ ಬೇರೆ ಹೇಳಿಕೆ ಕೊಡಿಸಿದರೂ ವಾಸ್ತವ ಸಂಗತಿ ಏನೆಂಬುದು ಎಲ್ಲರಿಗೂ ತಿಳಿದಿದೆ.
ಹಾಗೆ ನೋಡಿದರೆ ಸ್ವತಂತ್ರ ಭಾರತದಲ್ಲಿ ವೋಟ್ ಚೋರಿಯ ರೂವಾರಿಗಳೇ ಕಾಂಗ್ರೆಸ್. ದೇಶದ ಮೊದಲ ಪ್ರಧಾನಿ ಯಾರಾಗಬೇಕೆಂದು ಕಾಂಗ್ರೆಸ್ ನಲ್ಲಿ ಆಂತರಿಕ ಚುನಾವಣೆ ನಡೆದಾಗ ಸರ್ದಾರ್ ವಲ್ಲಭಭಾಯಿ ಪಟೇಲ್ ರಿಗೆ ಸ್ಪಷ್ಟ ಬಹುಮತ ಬಂದಿತ್ತು. ಆದರೂ ಅದನ್ನು ಕಡೆಗಣಿಸಿ ನೆಹರೂ ಅವರನ್ನು ಪ್ರಧಾನಿ ಮಾಡಿದ್ದು ಈ ದೇಶದ ಮೊದಲ ವೋಟ್ ಚೋರಿ.
ದೇಶದ ಜನರ ತೀರ್ಮಾನ, ಅಭಿಪ್ರಾಯವನ್ನೇ ಸುಳ್ಳು ಎಂದು ಆಪಾದನೆ ಮಾಡಿ, ಸಾಂವಿಧಾನಿಕ ಸಂಸ್ಥೆಗಳನ್ನು ಅನುಮಾನದಿಂದ ನೋಡುವ ರೀತಿ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡಿದ ದ್ರೋಹವಾಗಿದ್ದು ಕಾಂಗ್ರೆಸ್ಸಿಗರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಈಗ ಹೇಗೆ ಜನರಿಂದ ಕಡೆಗಣಿಸಲ್ಪಟ್ಟಿದ್ದಾರೋ ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ಹೀನಾಯ ಪರಿಸ್ಥಿತಿ ಬರಲಿದೆ.
ಈ ಸಂದರ್ಭದಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಎಂ, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಮಂಡಲದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ದೀಪಕ್ ಡಿಸೋಜ, ಮೂಡ ಮಾಜಿ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ನಿತಿನ್ ಕುಮಾರ್, ಮಂಡಲದ ಕಾರ್ಯದರ್ಶಿ ಸುಮತಿ ಚಂದ್ರಶೇಖರ್ ಉಪಸ್ಥಿತರಿದ್ದರು.


