ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಪ್ರದೇಶದ ರೈತರು, ವಿಧ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಸಮಸ್ಯೆ: ಅರುಣ್ ಕುಮಾರ್ ಪುತ್ತಿಲ

Prakhara News
3 Min Read

ಪುತ್ತೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿವಿಧ ನಿರ್ಧಾರಗಳು ರೈತರು, ಹೈನುಗಾರರು, ವಿದ್ಯಾರ್ಥಿಗಳು ಹಾಗೂ ರಾಜ್ಯದ ಸಾಮಾನ್ಯ ಜನರ ಬದುಕಿನ ಮೇಲೆ ಈಚೆಗೆ ಗಂಭಿರ ಪರಿಣಾಮ ಬೀರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಗಮನಿಸಿದಾಗ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಚರ್ಚೆಗೆ ಒಳಪಡಬೇಕಾದ ವಿಷಯಗಳಾಗಿವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಘೋಷಿಸಿರುವ ₹2,500 ಪರಿಹಾರ ಪಡೆಯಲು ಕೆಲವು ಮಾರ್ಗಸೂಚಿ ರೂಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಬೆಳೆವಿಮೆಯಲ್ಲೂ ಅದೇ ಮಾದರಿಯ ಗೊಂದಲವಾಗಿದೆ, ಇಂದಿಗೂ ಸರ್ಕಾರ, ಸ್ಥಳೀಯ ಶಾಸಕರು ಅದನ್ನು ಸರಿಪಡಿಸಲು ಮನಸ್ಸು ಮಾಡಿಲ್ಲ, ಹೋರಾಟ, ಪ್ರತಿಭಟನೆಗಳು ಆರಂಭವಾಗಿದೆ. ಈಗ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬರಪೀಡಿತ ಎಂದು ಗುರುತಿಸಲಾದ ಪ್ರದೇಶಗಳ ರೈತರಿಗೆ ಈ ಪರಿಹಾರ ತಲುಪುವ ಪ್ರಕ್ರಿಯೆ ಸರಳವಾಗಿರಬೇಕು. ಈಗಾಗಲೇ ಅಡಿಕೆ, ತೆಂಗು, ರಬ್ಬರ್, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳ ಕೃಷಿ ವೆಚ್ಚ ಹೆಚ್ಚಳದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಹಾರಕ್ಕಾಗಿ ದಾಖಲೆಗಳ ಪರಿಶೀಲನೆ, ತಾಂತ್ರಿಕ ಸಮಸ್ಯೆ ಹಾಗೂ ಕಚೇರಿಗಳ ಅಲೆದಾಟದಿಂದ ಅರ್ಹ ರೈತರು ತೊಂದರೆ ಅನುಭವಿಸಬಾರದು ಎಂದು ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯಿಸಿದ್ದಾರೆ.

ಬೆಳೆ ಸಮೀಕ್ಷೆ, ಆಧಾರ್ ಜೋಡಣೆ ಹಾಗೂ ಪಹಣಿ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಯಾವುದೇ ಅರ್ಹ ರೈತರಿಗೆ ಪರಿಹಾರ ಸಿಗದೆ ಹೋಗಬಾರದು. ರೈತರ ದಾಖಲೆಗಳಲ್ಲಿ ದೋಷಗಳಿದ್ದರೆ ಅಧಿಕಾರಿಗಳೇ ಸ್ಥಳೀಯವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಪರಿಹಾರ ನೀಡುವ ಉದ್ದೇಶ ರೈತರಿಗೆ ನೆರವಾಗುವುದೇ ಹೊರತು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವುದಲ್ಲ ಎಂದು ಹೇಳಿದ್ದಾರೆ.

ನವೆಂಬರ್ 1ರಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹8 ಹೆಚ್ಚಿಸಲಾಗಿದೆ. ಈ ಹೆಚ್ಚಳದಲ್ಲಿ ₹7 ಹೈನುಗಾರರಿಗೆ ಹಾಗೂ ₹1 ಹಾಲು ಒಕ್ಕೂಟಗಳಿಗೆ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಹೈನುಗಾರರಿಗೆ ಉತ್ತಮ ದರ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಾಲು ಖರೀದಿಸುವ ಸಾಮಾನ್ಯ ಕುಟುಂಬಗಳ ಆರ್ಥಿಕ ಸ್ಥಿತಿಯನ್ನೂ ಸರ್ಕಾರ ಪರಿಗಣಿಸಬೇಕು. ದಕ್ಷಿಣ ಕನ್ನಡದಲ್ಲಿ ಸಾವಿರಾರು ಕುಟುಂಬಗಳು ಹೈನುಗಾರಿಕೆಯನ್ನು ಉಪಕಸುಬಾಗಿ ಅವಲಂಬಿಸಿವೆ. ಪಶು ಆಹಾರ, ಮೇವು, ಪಶುವೈದ್ಯಕೀಯ ವೆಚ್ಚ ಹಾಗೂ ಕಾರ್ಮಿಕರ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಹೈನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಅದೇ ರೀತಿ ಗ್ರಾಹಕರ ಮೇಲಿನ ಬೆಲೆ ಏರಿಕೆಯ ಹೊರೆಯನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನವೆಂಬರ್ 5ರಿಂದ ರಾಜ್ಯದ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ದಕ್ಷಿಣ ಕನ್ನಡದ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಪ್ರಯಾಣವೇ ಜನರ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ಸೇರಿದಂತೆ ಗ್ರಾಮೀಣ ಭಾಗಗಳಿಂದ ಪ್ರತಿದಿನ ಮಂಗಳೂರು, ಪುತ್ತೂರು ಹಾಗೂ ಇತರ ಪಟ್ಟಣಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು, ಕಾರ್ಮಿಕರು ಮತ್ತು ವ್ಯಾಪಾರಸ್ಥರಿಗೆ ಬಸ್ ದರ ಏರಿಕೆ ನೇರವಾಗಿ ಪರಿಣಾಮ ಬೀರಲಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪ್ರತಿದಿನ ಬಸ್ ಅವಲಂಬಿಸಿದ್ದಾರೆ. ಈಗಾಗಲೇ ಕುಟುಂಬಗಳ ಖರ್ಚು ಹೆಚ್ಚಾಗಿರುವ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳವು ಅವರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಆದರೆ ಅದರ ಸಂಪೂರ್ಣ ಹೊರೆಯನ್ನು ಪ್ರಯಾಣಿಕರ ಮೇಲೆ ವರ್ಗಾಯಿಸುವ ಬದಲು ಪರ್ಯಾಯ ಮಾರ್ಗಗಳನ್ನೂ ಸರ್ಕಾರ ಪರಿಶೀಲಿಸಬೇಕು. ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರಯಾಣಿಕರ ಹಿತವನ್ನು ವಿಶೇಷವಾಗಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸಮರ್ಪಕ ಬಸ್ ಸೌಲಭ್ಯ, ರೈತರಿಗೆ ಬೆಳೆ ಪರಿಹಾರ, ಹೈನುಗಾರರಿಗೆ ನ್ಯಾಯಯುತ ಆದಾಯ, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದರ ಹಾಗೂ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳು ದೊರೆಯುವುದು ಕೂಡ ಅಷ್ಟೇ ಮುಖ್ಯ. ದಕ್ಷಿಣ ಕನ್ನಡ ಜಿಲ್ಲೆಯ ರೈತರು ಅಡಿಕೆ, ತೆಂಗು, ರಬ್ಬರ್, ಕಾಳುಮೆಣಸು ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ನಂಬಿ ಬದುಕುತ್ತಿದ್ದಾರೆ. ಕೃಷಿ ವೆಚ್ಚ ಹೆಚ್ಚಳ, ಮಾರುಕಟ್ಟೆ ಧಾರಣೆಯ ಏರಿಳಿತ, ಕಾರ್ಮಿಕರ ಕೊರತೆ ಮತ್ತು ಹವಾಮಾನ ವೈಪರೀತ್ಯಗಳಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಸರ್ಕಾರ ಆದ್ಯತೆಯ ಮೇರೆಗೆ ಪರಿಹಾರ ನೀಡಬೇಕು. ರೈತರಿಗೆ ಘೋಷಿಸಿದ ಪರಿಹಾರ ಸಕಾಲದಲ್ಲಿ ತಲುಪಬೇಕು. ಹೈನುಗಾರರ ಆದಾಯ ಹೆಚ್ಚಳದ ಜತೆಗೆ ಗ್ರಾಹಕರ ಹಿತವೂ ಕಾಪಾಡಬೇಕು. ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಹೊರೆಯಾಗದಂತೆ ಬಸ್ ದರ ನೀತಿಯನ್ನು ರೂಪಿಸಬೇಕು.

ಸರ್ಕಾರಕ್ಕೆ ಜನರ ಬದುಕು ಮುಖ್ಯವಾಗಬೇಕು. ಯೋಜನೆಗಳ ಘೋಷಣೆಗಿಂತ ಅವುಗಳ ಪರಿಣಾಮಕಾರಿ ಅನುಷ್ಠಾನ ಮುಖ್ಯ. ರೈತರು, ಹೈನುಗಾರರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.

Share This Article
Leave a Comment