ಮಂಗಳೂರು: ನಗರದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಮಹಿಳೆ ಅರೆಸ್ಟ್ – ₹15.30 ಲಕ್ಷದ MDMA ವಶ

Prakhara News
1 Min Read

ಮಂಗಳೂರು: ಮಂಗಳೂರು ನಗರದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದ ಮೇಲೆ 42 ವರ್ಷದ ಮಹಿಳೆಯೊಬ್ಬರನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದು, ಆಕೆಯಿಂದ ₹15.30 ಲಕ್ಷ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತೆಯನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗುರಿಂಗಾನ ಮನೆ ನಿವಾಸಿ ನಸೀಮಾ ಅಲಿಯಾಸ್ ನಸೀಮ (42) ಎಂದು ಗುರುತಿಸಲಾಗಿದೆ.

ನ.1ರಂದು ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಸೇವನೆ ಪ್ರಕರಣದ ಆರೋಪಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಪೂರೈಕೆಯ ಜಾಲದ ಕುರಿತು ತನಿಖೆ ಕೈಗೊಂಡಿದ್ದರು.

ಈ ವೇಳೆ ಪಂಪ್‌ವೆಲ್ ಉಜೋಡಿಯ ಬಳಿಯ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿರುವ ಫ್ಲ್ಯಾಟ್ ಸಂಖ್ಯೆ 103ರಲ್ಲಿ ಶೋಧ ನಡೆಸಿದ ಪೊಲೀಸರು, 153 ಗ್ರಾಂ MDMAಯನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಆರೋಪಿತೆಯು ಮಂಗಳೂರು ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಬಂಧಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದಲ್ಲಿ ಇನ್ನು ಕೆಲವು ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದ್ದು, ಅವರ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆ ಹಾಗೂ ಸೊತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್‌ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Share This Article
Leave a Comment