ಉಡುಪಿ: ಪ್ರದೀಪ್ ಪೂಜಾರಿ ಸಾವು ಪ್ರಕರಣ; ಸತ್ಯಾಸತ್ಯತೆ ಬಿಚ್ಚಿಟ್ಟ ಎಸ್ಪಿ ಹರಿರಾಂ ಶಂಕರ್ – ಅತ್ಯಾಚರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದವರ ಮೇಲೆ ಕೇಸು ದಾಖಲು – ಎಚ್ಚರಿಕೆ..!

Prakhara News
3 Min Read

ಉಡುಪಿ: ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣ, ಪ್ರದೀಪ್ ಪೂಜಾರಿ ಸಾವು ಹಾಗೂ ಪೊಲೀಸ್ ವೈಫಲ್ಯಗಳ ಕುರಿತು ಹರಡುತ್ತಿರುವ ವಾದ-ಪ್ರತಿವಾದಗಳ ಕುರಿತು ಪೊಲೀಸರು ಅಧಿಕೃತ ಹಾಗೂ ಸ್ಪಷ್ಟ ವಿವರಣೆ ನೀಡಿದ್ದಾರೆ. ತನಿಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಲಭ್ಯವಿರುವ ಸಾಕ್ಷ್ಯಾಧಾರಗಳು ಮತ್ತು ವೈದ್ಯಕೀಯ ವರದಿಗಳ ಆಧಾರದ ಮೇಲೆ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಲಾಗಿದೆ.

  1. ಸಂತ್ರಸ್ತೆ ಮೇಲಿನ ಅತ್ಯಾಚಾರ ಪ್ರಕರಣಗಳ ನೈಜ ಹಿನ್ನೆಲೆ:
    ಮೊದಲ ಪ್ರಕರಣ (ನವೆಂಬರ್ 10, 2025): ಸಂತ್ರಸ್ತ ಯುವತಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಪ್ರದೀಪ್ ಪೂಜಾರಿ ಅಡ್ಡಗಟ್ಟಿ, ಮದುವೆಯಾಗುವಂತೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ CR ನಂಬರ್ 49/2025 ರಡಿ ಎಫ್‌ಐಆರ್ ದಾಖಲಾಗಿ, ಪ್ರದೀಪ್ ಪೂಜಾರಿಯನ್ನು ಬಂಧಿಸಲಾಗಿತ್ತು.

ಎರಡನೇ ಘಟನೆ (ನವೆಂಬರ್ 29, 2025): ಜಾಮೀನಿನ ಮೇಲೆ ಹೊರಬಂದಿದ್ದ ಪ್ರದೀಪ್ ಪೂಜಾರಿ, ನೊಂದ ಮಹಿಳೆಯನ್ನು ಕಾಡಿನ ಹಾದಿಗೆ ಎಳೆದುಕೊಂಡು ಹೋಗಿ, ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರ ಎಸೆಗಿದ್ದರು. ಈ ಸಂಬಂಧ CR ನಂಬರ್ 53/2025 ರಡಿ ಪ್ರಕರಣ ದಾಖಲಾಗಿತ್ತು. ವೈದ್ಯಕೀಯ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಈಗಾಗಲೇ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಸದ್ಯ ವಿಚಾರಣೆ ನಡೆಯುತ್ತಿದೆ. ನೊಂದ ಮಹಿಳೆ 3 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ದೇಹದ ಮೇಲಿನ ಗಾಯಗಳ ಸಂಪೂರ್ಣ ದಾಖಲೆಗಳಿವೆ.

  1. ಮೂರನೇ ಘಟನೆ (ಅಕ್ಟೋಬರ್ 28, 2026) – ಕೊಲೆ ಯತ್ನ ಹಾಗೂ ಹಲ್ಲೆ:
    ಅಕ್ಟೋಬರ್ 28, 2026 ರ ರಾತ್ರಿ ನೊಂದ ಮಹಿಳೆ ಸ್ನಾನ ಮಾಡಿ ಹೊರಬಂದಾಗ, ಪ್ರದೀಪ್ ಪೂಜಾರಿ ಖಾರದ ಪುಡಿ ಹಾಗೂ ಮಾರಕ ವಸ್ತುಗಳೊಂದಿಗೆ ಬಂದು ಹತ್ಯೆ ಮಾಡಲು ಯತ್ನ ನಡೆಸಿದ್ದಾರೆ. ತಡೆಯಲು ಬಂದ ತಾಯಿಯ ಮೇಲೂ ಖಾರದ ಪುಡಿ ಎರಚಲಾಗಿದೆ.
    ಸದ್ದು ಕೇಳಿ ಸ್ಥಳೀಯರು ಬಂದಾಗ, ಪ್ರದೀಪ್ ಪೂಜಾರಿ ನೊಂದ ಮಹಿಳೆಯ ಖಾಸಗಿ ಫೋಟೋ ಹಾಗೂ ವೀಡಿಯೊಗಳನ್ನು ತೋರಿಸಿ ಅಪಪ್ರಚಾರ ಮಾಡಲು ಯತ್ನಿಸಿದ್ದಾರೆ. ಘಟನಾ ಸ್ಥಳದಿಂದ ಖಾರದ ಪುಡಿ ಪ್ಯಾಕೆಟ್‌ಗಳು ದೊರೆತಿವೆ. ಸಂತ್ರಸ್ತೆ ಹಾಗೂ ತಾಯಿಯ ಕುತ್ತಿಗೆಯ ಮೇಲಿನ ಪರಚಿದ ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದಾಖಲೆಗಳಿವೆ.
    ಇದೇ ವೇಳೆ, ಸ್ಥಳಕ್ಕೆ ಬಂದ 7 ರಿಂದ 8 ಜನರ ತಂಡ ಪ್ರದೀಪ್ ಪೂಜಾರಿ ಮೇಲೆ ಹಲ್ಲೆ (Assault) ನಡೆಸಿದೆ. ಈ ಸಂಬಂಧ ಗಾಯಗೊಂಡಿದ್ದ ಪ್ರದೀಪ್ ಪೂಜಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಅವರು ಮೃತಪಟ್ಟಿದ್ದಾರೆ.
  2. ಪೊಲೀಸ್ ಸಿಬ್ಬಂದಿ ಮೇಲೆ ಶಿಸ್ತು ಕ್ರಮ:
    ಪ್ರದೀಪ್ ಪೂಜಾರಿ ನೀಡಿದ ದೂರಿನ ಮೇರೆಗೆ ತಕ್ಷಣವೇ ನೇರ ಎಫ್‌ಐಆರ್ ದಾಖಲಿಸದೆ ಕೇವಲ ಎನ್‌ಸಿ (NC) ದಾಖಲಿಸಿಕೊಂಡಿರುವ ಸ್ಥಳೀಯ ಠಾಣೆಯ ನಿರ್ಲಕ್ಷ ಗಮನಿಸಲಾಗಿದೆ.

ಈ ಸಂಬಂಧ ಕರ್ತವ್ಯಲೋಪವೆಂದು ಪರಿಗಣಿಸಿ, ಸಬ್ ಇನ್ಸ್‌ಪೆಕ್ಟರ್ ಅವರನ್ನು ಕೂಡಲೇ ಡ್ಯೂಟಿಯಿಂದ ರಿಮೂವ್ ಮಾಡಿ ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರದಿ ಮಾಡಲು ಆದೇಶಿಸಲಾಗಿದೆ. ಅಡಿಷನಲ್ ಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮುಂದೆ ಹಿರಿಯಡಕ ಠಾಣೆಯಲ್ಲಿ ಆ ಅಧಿಕಾರಿ ಮುಂದುವರಿಯುವುದಿಲ್ಲ.

ಪ್ರದೀಪ್ ಪೂಜಾರಿ ಸಾವಿನ ಅಬೆಟ್ಮೆಂಟ್ ಆಫ್ ಸೂಸೈಡ್ (Abetment to Suicide) ಪ್ರಕರಣ ದಾಖಲಿಸಿಕೊಂಡು, ನಿಷ್ಪಕ್ಷಪಾತ ತನಿಖೆಗಾಗಿ ಮಣಿಪಾಲ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ತನಿಖೆ ಹಸ್ತಾಂತರಿಸಲಾಗಿದೆ. ಆರೋಪಿಗಳ ಬಂಧನಕ್ಕೆ 4-5 ತಂಡಗಳನ್ನು ಕಳುಹಿಸಲಾಗಿದೆ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ.

ಸೋಶಿಯಲ್ ಮೀಡಿಯಾ ಟ್ರೈಲ್ ವಿರುದ್ಧ ಕಠಿಣ ಎಚ್ಚರಿಕೆ:
ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನೊಂದ ಮಹಿಳೆಯ ವೈಯಕ್ತಿಕ ಫೋಟೋಗಳು, ಖಾಸಗಿ ಚಿತ್ರಗಳನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾ ಟ್ರಯಲ್ ಮಾಡಲಾಗುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಕಾನೂನುಬಾಹಿರವಾಗಿದೆ. ಬಿಎನ್‌ಎಸ್ (BNS) ಸೆಕ್ಷನ್ 72 ರ ಪ್ರಕಾರ ರೇಪ್ ವಿಕ್ಟಿಮ್‌ಗಳ ವಿವರ ಅಥವಾ ಫೋಟೋ ಶೇರ್ ಮಾಡುವುದು ಅಪರಾಧ. ಈಗಾಗಲೇ ಇಂತಹ 150 ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಪ್ರೊಫೈಲ್ ಹಾಗೂ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಎಲ್ಲರ ವಿರುದ್ಧವೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮುಂದೊಮ್ಮೆ ಯಾವುದೇ ಮಹಿಳೆ ಅತ್ಯಾಚಾರದಂತಹ ದೌರ್ಜನ್ಯಕ್ಕೊಳಗಾದಾಗ, “ಸಮಾಜದಲ್ಲಿ ನನ್ನ ಮರ್ಯಾದೆ ಹೋಗುತ್ತದೆ, ಸೋಶಿಯಲ್ ಮೀಡಿಯಾದಲ್ಲಿ ನನ್ನನ್ನು ಅಪರಾಧಿಯಂತೆ ಬಿಂಬಿಸುತ್ತಾರೆ” ಎಂಬ ಕಾರಣಕ್ಕೆ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಹೆದರುವಂತಹ ವಾತಾವರಣ ನಿರ್ಮಾಣವಾಗಬಾರದು. ಸತ್ಯಾಸತ್ಯತೆ ತಿಳಿಯದೆ ಹೆಣ್ಣುಮಕ್ಕಳ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವುದು ಪೊಲೀಸರ ಜವಾಬ್ದಾರಿಯಾದರೂ, ನ್ಯಾಯ ಒದಗಿಸುವ ಭರದಲ್ಲಿ ಮತ್ತೊಬ್ಬ ನೊಂದ ಮಹಿಳೆಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment