ಕೇರಳ: ಅಜ್ಜಿಗೆ ಹಿಡಿದಿರುವ ದುಷ್ಟಶಕ್ತಿಯನ್ನು ಓಡಿಸುವ ಹಾಗೂ ಶುದ್ಧೀಕರಣ ಪೂಜೆಯ ನೆಪವೊಡ್ಡಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಹಲವು ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಕೇರಳದ ಪ್ರಸಿದ್ಧ ಇಸ್ಲಾಮಿಕ್ ಧರ್ಮಪ್ರಚಾರಕನನ್ನು ಕೊಲ್ಲಂ ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಯನ್ನು ಕೊಲ್ಲಂ ಮೂಲದ ಮುಹಮ್ಮದ್ ನಿಯಾಸ್ ಜೌಹರಿ (34) ಎಂದು ಗುರುತಿಸಲಾಗಿದ್ದು, ಭಾನುವಾರ ಆತನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಜೌಹರಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಆತನ ಯೂಟ್ಯೂಬ್ ಚಾನೆಲ್ ಒಂದರಲ್ಲೇ 2.25 ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರೆ (Subscribers).

ಘಟನೆಯ ಹಿನ್ನೆಲೆ:
ಕೊಲ್ಲಂನ ಓಚಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಸಂತ್ರಸ್ತ ಬಾಲಕಿಯ ಕುಟುಂಬಸ್ಥರು ನಿಯಾಸ್ ಜೌಹರಿಯ ಭಾಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವೀಕ್ಷಿಸುತ್ತಿದ್ದರು. ಕಳೆದ ವರ್ಷ ಬಾಲಕಿ ತನ್ನ ಅಜ್ಜಿಯೊಂದಿಗೆ ಧಾರ್ಮಿಕ ಶಿಕ್ಷಣ ನೀಡುವ ಜೌಹರಿಯ ‘ಹಬೀಬಿಯಾ ಇಸ್ಲಾಮಿಕ್ ಅಕಾಡೆಮಿ’ಗೆ ಭೇಟಿ ನೀಡಿದ್ದಳು.

ಈ ವೇಳೆ ಅಜ್ಜಿಯನ್ನು ನಂಬಿಸಿದ ಆರೋಪಿ, “ನಿಮ್ಮ ಮೇಲೆ ದುಷ್ಟಶಕ್ತಿಯ ಕರಿನೆರಳು ಬಿದ್ದಿದೆ, ಅದನ್ನು ತೊಲಗಿಸಲು ವಿಶೇಷ ಶುದ್ಧೀಕರಣ ಪ್ರಕ್ರಿಯೆ ನಡೆಸಬೇಕು” ಎಂದು ಪುಸಲಾಯಿಸಿದ್ದಾನೆ. ನಂತರ ಇಬ್ಬರನ್ನೂ ತಾನು ಬಾಡಿಗೆಗೆ ಪಡೆದಿದ್ದ ಮನೆಗೆ ಕರೆದೊಯ್ದು, ಕಳೆದ ವರ್ಷದ ಅಕ್ಟೋಬರ್ನಿಂದ ಆರಂಭಿಸಿ ಸುಮಾರು ಎರಡು ತಿಂಗಳ ಕಾಲ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತೆಯರ ಬಳಿ ನೋವು ತೋಡಿಕೊಂಡಾಗ ಬಯಲಾಯ್ತು ಸತ್ಯ:
ತೀವ್ರ ಮಾನಸಿಕ ಆಘಾತ ಮತ್ತು ಖಿನ್ನತೆಗೆ ಒಳಗಾಗಿದ್ದ ಸಂತ್ರಸ್ತ ಬಾಲಕಿ, ಇತ್ತೀಚೆಗೆ ತನ್ನ ಆಪ್ತ ಸ್ನೇಹಿತೆಯರ ಬಳಿ ಈ ಘೋರ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತಕ್ಷಣವೇ ಈ ವಿಷಯ ಬೆಳಕಿಗೆ ಬಂದಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷಾ ವರದಿಗಳು ಹಾಗೂ ಆರೋಪಿಯ ಮೊಬೈಲ್ ಚಾಟ್ಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಪೊಲೀಸರು ಜೌಹರಿಯನ್ನು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಪೋಕ್ಸೊ (POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಅತ್ಯಾಚಾರ ಮತ್ತು ಜೀವ ಬೆದರಿಕೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ, ಆತನ ಡಿಜಿಟಲ್ ಉಪಕರಣಗಳು ಮತ್ತು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದ್ದು, ಹೆಚ್ಚಿನ ವಿಧಿವಿಜ್ಞಾನ ತನಿಖೆಗೆ ಒಳಪಡಿಸಲಾಗಿದೆ.

ಇತ್ತೀಚೆಗಷ್ಟೇ ಖ್ಯಾತ ಮುಸ್ಲಿಂ ನಟಿಯೊಬ್ಬರ ವಸ್ತ್ರಧಾರಣೆಯ ಬಗ್ಗೆ “ಇದು ಇಸ್ಲಾಮಿಕ್ ಸಂಪ್ರದಾಯಕ್ಕೆ ವಿರುದ್ಧ” ಎಂದು ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಈ ಪ್ರಚಾರಕ ವ್ಯಾಪಕ ಸುದ್ದಿಯಾಗಿದ್ದ.


