ವ್ಯಾಪಕ ಟೀಕೆ ಬೆನ್ನಲ್ಲೇ ಕೃತಿ ಸನೋನ್ ಅಭಿನಯದ ರಕ್ಷಾಬಂಧನದ ಜಾಹೀರಾತು ಹಿಂಪಡೆದ ಜೀವಾ..!

Prakhara News
1 Min Read

ಬೆಂಗಳೂರು:ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯದ ರಕ್ಷಾಬಂಧನ ಹಬ್ಬದ ವಿಶೇಷ ಜಾಹೀರಾತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಪ್ರಸಿದ್ಧ ಆಭರಣ ಸಂಸ್ಥೆ ‘ಜಿವಾ’ (GIVA) ಆ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿದೆ.

ಸಾಕುಪ್ರಾಣಿಯೊಂದಿಗೆ ರಕ್ಷಾಬಂಧನ ಆಚರಿಸುವ ಪರಿಕಲ್ಪನೆಯನ್ನು ಹೊಂದಿದ್ದ ಈ ಜಾಹೀರಾತು ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಜಿವಾ ಸಂಸ್ಥೆ, “ನಾವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳಿಗೆ ಅತ್ಯುನ್ನತ ಗೌರವ ಹಾಗೂ ಮನ್ನಣೆ ನೀಡುತ್ತೇವೆ. ಒಂದು ಬ್ರ್ಯಾಂಡ್ ಆಗಿ ಇಂತಹ ಸಂಭ್ರಮದ ಕ್ಷಣಗಳನ್ನು ಇಡೀ ಕುಟುಂಬದೊಂದಿಗೆ ಆಚರಿಸುವುದರಲ್ಲಿ ನಾವು ಸದಾ ನಂಬಿಕೆ ಇಟ್ಟಿದ್ದೇವೆ. ಈ ಬಾರಿ ಆ ಪ್ರೀತಿ ಮತ್ತು ಸಂಭ್ರಮವನ್ನು ನಮ್ಮ ಮುದ್ದಿನ ಸಾಕುಪ್ರಾಣಿಗಳಿಗೂ ವಿಸ್ತರಿಸುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಇತ್ತೀಚಿನ ಜಾಹೀರಾತು ಸಮಾಜದ ಯಾವುದೇ ವರ್ಗದ ಜನರ ಭಾವನೆಗಳಿಗೆ ಅಜಾಗರೂಕತೆಯಿಂದ ನೋವುಂಟುಮಾಡಿದ್ದರೆ, ಅದು ನಮ್ಮ ಉದ್ದೇಶವಾಗಿರಲಿಲ್ಲ. ಜನರ ಭಾವನೆಗಳಿಗೆ ಗೌರವ ನೀಡಿ, ನಾವು ಈ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿದ್ದೇವೆ” ಎಂದು ಸ್ಪಷ್ಟಪಡಿಸಿದೆ.

ಜಾಹೀರಾತಿನಲ್ಲಿ ಕೃತಿ ಸನೋನ್ ಅವರು ಬಿಳಿ ಬಣ್ಣದ ‘ಬ್ರಾಲೆಟ್’ ಶೈಲಿಯ ‘ಡೀಪ್ ವಿ-ನೆಕ್’ ಬ್ಲೌಸ್, ಕೇಪ್ ಮತ್ತು ಸ್ಕರ್ಟ್ ಧರಿಸಿ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಸಹೋದರ-ಸಹೋದರಿಯರ ಪವಿತ್ರ ಹಬ್ಬಕ್ಕೆ ಇಂತಹ ಗ್ಲಾಮರಸ್ ಉಡುಪು ಸೂಕ್ತವಲ್ಲ ಎಂದು ಹಲವರು ಆಕ್ಷೇಪಿಸಿದ್ದರು. ಜೊತೆಗೆ, ಕೃತಿ ಅವರು ತಮ್ಮ ಸಹೋದರನಿಗೆ ರಾಖಿ ಕಟ್ಟಿದ ನಂತರ, ತಮ್ಮ ಸಾಕು ನಾಯಿಗೂ ರಾಖಿ ಕಟ್ಟಿದ್ದರು. ಇದು ಭಾರತೀಯ ಹಬ್ಬ ಮತ್ತು ಸಂಪ್ರದಾಯವನ್ನು ಅಣಕಿಸುವಂತಿದೆ ಎಂದು ನೆಟ್ಟಿಗರು ಕಟುವಾಗಿ ಕಿಡಿಕಾರಿದ್ದರು.

Share This Article
Leave a Comment