ಉತ್ತರಾಖಂಡ್‌ನ ಖತಿಮಾ ಪ್ರದೇಶದಲ್ಲಿ ನಡೆದ ವಿಚಿತ್ರ ಹಾಗೂ ಆತಂಕಕಾರಿ ರಸ್ತೆ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಕಾಡಾನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆಯ ದಂತ ಮುರಿದು ಹೋಗಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.


ಈ ಉತ್ತರಾಖಂಡದ ಚಕರ್ಪುರ ಪ್ರದೇಶದ ಆನೆ ಕಾರಿಡಾರ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ನಿಕಿತಾ ಕಪ್ರಿ ಎಂಬ ಮಹಿಳೆ ತನ್ನ ಸ್ಕೂಟರ್‌ನಲ್ಲಿ ತನಕ್ಪುರದಿಂದ ಖತಿಮಾಕ್ಕೆ ವಾಪಸಾತಿಯಾಗಿದ್ದಾಳೆ. ಅವರು ಖತಿಮಾದ ಹಿಂದ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿ ಹೊಂದಿದ್ದು, ನಂತರ ಮನೆಗೆ ಭೇಟಿ ನೀಡಿ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ.

ಮಂಗಳವಾರ ಬೆಳಿಗ್ಗೆ ನಡೆದ ಈ ಘಟನೆ ವೇಳೆ, ಬನ್ಬಾಸಾ ಮತ್ತು ಚಕರ್ಪುರ ನಡುವಿನ ದಟ್ಟ ಕಾಡು ಪ್ರದೇಶದಲ್ಲಿ ಆನೆ ಏಕಾಏಕಿ ರಸ್ತೆ ಮೇಲೆ ಬಂದಿತ್ತು. ರಸ್ತೆ ಮಧ್ಯೆ ಆನೆ ತಕ್ಷಣ ಮಹಿಳೆ ಗಾಬರಿಗೊಂಡಿದ್ದು, ಸ್ಕೂಟರ್ ನಿಯಂತ್ರಣ ತಪ್ಪಿ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದೆ ಹೇಳಲಾಗಿದೆ.

ಡಿಕ್ಕಿಯ ರಭಸಕ್ಕೆ ಆನೆಯ ಒಂದು ದಂತ ಮುರಿದು ಮೂರು ತುಂಡುಗಳಾಗಿದ್ದು ,ಆನೆ ತಕ್ಷಣವೇ ಕಾಡಿನೊಳಗೆ ಓಡಿಹೋಗಿದೆ. ಘಟನೆಯಲ್ಲಿ ಮಹಿಳೆ ಗಾಯಗೊಂಡಿದ್ದರೆ, ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಆನೆಯ ಮುರಿದ ದಂತವನ್ನು ಅಧಿಕಾರಿಗಳು ವಶಪಡಿಸಿಕೊಂಡು ಸುರಕ್ಷಿತವಾಗಿ ಕಚೇರಿಯಲ್ಲಿ ಇರಿಸಿದ್ದಾರೆ. ಜೊತೆಗೆ ಆನೆಯ ಚಲನವಲನಗಳ ಮೇಲೆ ನಿಗಾ ಇಡಲು ಘಟನಾ ಸ್ಥಳದ ಸುತ್ತಮುತ್ತ ಎರಡು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ಬಳಿಕ ಅರಣ್ಯ ಇಲಾಖೆ ವಾಹನ ಸವಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಆನೆ ಕಾರಿಡಾರ್ ಪ್ರದೇಶಗಳಲ್ಲಿ ವಿಶೇಷ ಜಾಗ್ರತೆ ವಹಿಸುವಂತೆ ಮನವಿ ಮಾಡಿದೆ.


