105 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ ಕೋರ್ಟ್..!

Prakhara News
2 Min Read

ನವದೆಹಲಿ: 1988ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ. ವೃದ್ಧಾಪ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿದ ನ್ಯಾಯಾಲಯ, ಉಳಿದಿರುವ ಜೀವಾವಧಿ ಶಿಕ್ಷೆಯನ್ನು ಮನ್ನಾ ಮಾಡಿ ಅವರನ್ನು ಮತ್ತೆ ಜೈಲಿಗೆ ಕಳುಹಿಸದಂತೆ ಆದೇಶಿಸಿದೆ.

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರಸಿಕ್ ಚಂದ್ರ ಮೊಂಡಲ್ ಎಂಬುವವರು 1988 ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯವು 1994 ರಲ್ಲಿ ಇವರನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅಂದಿನಿಂದ ಇವರು ಜೈಲು ಪಾಲಾಗಿದ್ದು, ಬಹುತೇಕ ಮೂರು ದಶಕಗಳ ಕಾಲ ಜೈಲಿನಲ್ಲಿಯೇ ಕಳೆದಿದ್ದರು. ತಮಗೆ ವಯಸ್ಸಾಗಿರುವ ಕಾರಣ ಅವಧಿಗೂ ಮುನ್ನವೇ ಬಿಡುಗಡೆ ಮಾಡಬೇಕೆಂದು ಕೋರಿ ಇವರು 2020 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ನವೆಂಬರ್ 2024 ರಲ್ಲಿ ಸುಪ್ರೀಂ ಕೋರ್ಟ್ ಇವರಿಗೆ ಮಧ್ಯಂತರ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಿತ್ತು. ಇದರ ನಡುವೆ, ಜೀವಾವಧಿ ಶಿಕ್ಷೆಯ ಅವಧಿ ಇನ್ನೂ ಬಾಕಿ ಉಳಿದಿದ್ದರೂ, ಈಗ ಆ ಆದೇಶವನ್ನು ನ್ಯಾಯಾಲಯವು ಅಂತಿಮ ಮತ್ತು ಶಾಶ್ವತ ಆದೇಶವಾಗಿ ಪರಿವರ್ತಿಸಿದೆ. ಅದರಂತೆ, ಅವರ 105 ವರ್ಷದ ವಯಸ್ಸನ್ನು ಗೌರವಿಸಿ ಉಳಿದ ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ. ಇದರೊಂದಿಗೆ, “ಇನ್ನು ಮುಂದೆ ಮಂಡಲ್ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಕಸ್ಟಡಿಗೆ ಅಥವಾ ಜೈಲಿಗೆ ತೆಗೆದುಕೊಳ್ಳುವಂತಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ರಸಿಕ್ ಚಂದ್ರ ಮಂಡಲ್ ಅವರು ತಾವು ನಿರಪರಾಧಿ ಎಂದು ಸಾಬೀತುಪಡಿಸಲು ಮೊದಲು ಕಲ್ಕತ್ತಾ ಹೈಕೋರ್ಟ್, ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2020 ರಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ನೀಡಿ ಅವಧಿಗೂ ಮುನ್ನ ಬಿಡುಗಡೆಗಾಗಿ ಅರ್ಜಿ ಸಲ್ಲಿಸಿದ್ದರು. ಕೊನೆಗೂ 1988 ರಿಂದ ಆರಂಭವಾಗಿದ್ದ ಸುಮಾರು 38 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಸುಪ್ರೀಂ ಕೋರ್ಟ್‌ನಿಂದ ಪೂರ್ಣವಿರಾಮ ಬಿದ್ದಿದೆ. ಇದರೊಂದಿಗೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಹಿರಿಯ ವಯಸ್ಸಿನ ಕೈದಿಯೊಬ್ಬರಿಗೆ ವಯಸ್ಸಿನ ಆಧಾರದ ಮೇಲೆ ಮಾನವೀಯತೆಯ ಮುಕ್ತಿ ಸಿಕ್ಕಂತಾಗಿದೆ.

Share This Article
Leave a Comment