ಮಂಗಳೂರು/ಪಾಲಕ್ಕಾಡ್: ಮಂಗಳೂರು ರೈಲ್ವೇ ಪ್ರದೇಶವನ್ನು ದಕ್ಷಿಣ ರೈಲ್ವೆಯ (Southern Railway) ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕೇಂದ್ರ ರೈಲ್ವೇ ಮಂಡಳಿಯ ನಿರ್ಧಾರವು ಕರಾವಳಿ ಕರ್ನಾಟಕದಲ್ಲಿ ಹರ್ಷ ಮೂಡಿಸಿದ್ದರೆ, ನೆರೆಯ ಕೇರಳದಲ್ಲಿ ತೀವ್ರ ಆಕ್ರೋಶ ಹಾಗೂ ಕಳವಳಕ್ಕೆ ಕಾರಣವಾಗಿದೆ. “ರೈಲ್ವೇ ಇಲಾಖೆಯು ಕೇರಳಕ್ಕೆ ಓಣಂ ಹಬ್ಬದ ದುಃಖದ ಕೊಡುಗೆ ನೀಡಿದೆ. ಮಂಗಳೂರನ್ನು ಕಳೆದುಕೊಳ್ಳುವುದರೊಂದಿಗೆ 70 ವರ್ಷ ಹಳೆಯ ಪಾಲಕ್ಕಾಡ್ ವಿಭಾಗ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ” ಎಂದು ಮಲಬಾರ್ ಭಾಗದ ರೈಲ್ವೇ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅಕ್ಟೋಬರ್ 1 ರಿಂದ ಜಾರಿಗೆ ಬರಲಿರುವ ಹೊಸ ನಿರ್ಧಾರದ ಪ್ರಕಾರ ಉಳ್ಳಾಲದಿಂದ ಮಂಗಳೂರು ಜಂಕ್ಷನ್ವರೆಗಿನ 18 ಕಿ.ಮೀ. ಮಾರ್ಗ ಹಾಗೂ ಮಂಗಳೂರಿನ ಪ್ರಮುಖ ಟರ್ಮಿನಲ್ ನಿಲ್ದಾಣಗಳು ಮೈಸೂರು ವಿಭಾಗಕ್ಕೆ ಸೇರಲಿವೆ. ಇದರೊಂದಿಗೆ ನವ ಮಂಗಳೂರು ಬಂದರಿನ (ಪಣಂಬೂರು) ಮೂಲಕ ಪಾಲಕ್ಕಾಡ್ ವಿಭಾಗಕ್ಕೆ ಬರುತಿದ್ದ ಸಿಂಹಪಾಲು ಆದಾಯ ಕೈತಪ್ಪಲಿದೆ. ಮಾಹಿತಿ ಪ್ರಕಾರ, ಪಾಲಕ್ಕಾಡ್ ವಿಭಾಗ ತನ್ನ ವಾರ್ಷಿಕ ಆದಾಯದ ಶೇ.75 ಕ್ಕಿಂತ ಹೆಚ್ಚು ಭಾಗವನ್ನು ಮಂಗಳೂರು ಭಾಗದ ಸರಕು ಸಾಗಣೆಯಿಂದಲೇ ಪಡೆಯುತ್ತಿತ್ತು. ಈಗ ವಾರ್ಷಿಕ ₹500 ರಿಂದ ₹600 ಕೋಟಿ ರೂಪಾಯಿಗಳ ನೇರ ಆದಾಯ ನಷ್ಟವಾಗಲಿದ್ದು, ಪಾಲಕ್ಕಾಡ್ ವಿಭಾಗ ನಿರ್ವಹಣಾ ವೆಚ್ಚಕ್ಕೂ ಪರದಾಡುವಂತಾಗಲಿದೆ.

ಆಗಸ್ಟ್ 31, 1956 ರಂದು 1,247.50 ಕಿ.ಮೀ. ರೈಲು ಹಳಿ ವ್ಯಾಪ್ತಿಯೊಂದಿಗೆ ಆರಂಭವಾಗಿದ್ದ ಪಾಲಕ್ಕಾಡ್ ವಿಭಾಗ, ತಿರುವನಂತಪುರಂ ಹಾಗೂ 2007 ರಲ್ಲಿ ಸೇಲಂ ವಿಭಾಗಗಳು ಪ್ರತ್ಯೇಕಗೊಂಡಾಗ ತನ್ನ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತಾ ಬಂದಿತ್ತು. ಈಗ ಮಂಗಳೂರು ಕೂಡ ಕಳೆದುಹೋಗಿರುವುದರಿಂದ ಪಾಲಕ್ಕಾಡ್ನಲ್ಲಿ ಯಾವುದೇ ಮುಖ್ಯ ಟರ್ಮಿನಲ್ ನಿಲ್ದಾಣ ಉಳಿಯುವುದಿಲ್ಲ. ಇದರಿಂದಾಗಿ ಭವಿಷ್ಯದಲ್ಲಿ ಮಲಬಾರ್ ಭಾಗಕ್ಕೆ ಹೊಸ ರೈಲುಗಳನ್ನು ಆರಂಭಿಸಲು ಅಥವಾ ನಿರ್ವಹಿಸಲು ಜಾಗವಿಲ್ಲದಂತಾಗುತ್ತದೆ ಎಂದು ಮಲಬಾರ್ ರೈಲು ಬಳಕೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ. ರಾಮಕೃಷ್ಣನ್ ಆರೋಪಿಸಿದ್ದಾರೆ.



