ಕೋಝಿಕ್ಕೋಡ್ : ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ, ಜಾಗತಿಕ ಮಲಯಾಳಿ ಸಮುದಾಯದ ಅಸಾಧಾರಣ ಮಾನವೀಯ ಅಭಿಯಾನದಿಂದಾಗಿ ಜೀವದಾನ ಪಡೆದ ಕೋಝಿಕ್ಕೋಡ್ ಮೂಲದ ಅಬ್ದುಲ್ ರಹೀಮ್ ಗುರುವಾರ ಬೆಳಿಗ್ಗೆ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸುಮಾರು ಎರಡು ದಶಕಗಳ ಬಳಿಕ ತಾಯ್ನಾಡಿಗೆ ಮರಳಿದ ರಹೀಮ್ ಅವರನ್ನು ಬರಮಾಡಿಕೊಳ್ಳಲು ಫೆರೋಕ್‌ನ ಕೊಡಂಪುಳದಲ್ಲಿರುವ ಅವರ ನಿವಾಸದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.


ಅಬ್ದುಲ್ ರಹೀಮ್ ಅವರು ಉದ್ಯೋಗ ಆರಿಸಿ 2006 ರಲ್ಲಿ ಸೌದಿ ಅರೇಬಿಯಾದ ರಿಯಾದ್‌ಗೆ ತೆರಳಿದ್ದರು. ಅಲ್ಲಿ ಅವರು ಸೌದಿ ಪ್ರಜೆಯೊಬ್ಬರ ಮನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡರು. ಆದರೆ, ಕೆಲಸಕ್ಕೆ ಸೇರಿದ ಕೆಲವೇ ವಾರಗಳಲ್ಲಿ ದುರಂತವೊಂದು ಸಂಭವಿಸಿತು. ಅವರ ಮಾಲೀಕರ 15 ವರ್ಷದ ಪಾರ್ಶ್ವವಾಯು ಪೀಡಿತ ಮಗ ಅನಸ್ ಅಲ್-ಶಹ್ರಿಯ ಜೊತೆ ರಹೀಮ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅನಸ್‌ನ ಕುತ್ತಿಗೆಗೆ ಜೋಡಿಸಲಾಗಿದ್ದ ವೈದ್ಯಕೀಯ ಆಹಾರ ಸಾಧನ (Medical Feeding Device) ಆಕಸ್ಮಿಕವಾಗಿ ಕಳಚಿ ಬಿದ್ದಿತ್ತು. ಇದರ ಪರಿಣಾಮವಾಗಿ ಉಸಿರುಗಟ್ಟಿ ಹದಿಹರೆಯದ ಅನಸ್ ಸಾವನ್ನಪ್ಪಿದ್ದನು. ಈ ಆಕಸ್ಮಿಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಪೊಲೀಸರು ರಹೀಮ್ ಅವರನ್ನು ತಕ್ಷಣ ಬಂಧಿಸಿದ್ದರು. ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಸೌದಿ ನ್ಯಾಯಾಲಯ ರಹೀಮ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಮರಣದಂಡನೆಯಿಂದ ಪಾರಾಗಲು ಇಸ್ಲಾಮಿಕ್ ಕಾನೂನಿನಡಿಯಲ್ಲಿ ಬಲಿಪಶುವಿನ ಕುಟುಂಬಕ್ಕೆ ‘ದಿಯತ್’ (ರಕ್ತದ ಹಣ/ಆರ್ಥಿಕ ಪರಿಹಾರ) ನೀಡುವುದು ಒಂದೇ ಕೊನೆಯ ಭರವಸೆಯಾಗಿತ್ತು. ಇದಕ್ಕಾಗಿ ಅನಸ್ ಕುಟುಂಬಸ್ಥರು ಬರೋಬ್ಬರಿ 15 ಮಿಲಿಯನ್ ಸೌದಿ ರಿಯಾಲ್ (ಸುಮಾರು ₹34 ಕೋಟಿ ರೂಪಾಯಿ) ಬೇಡಿಕೆ ಇಟ್ಟಿದ್ದರು. ಇಷ್ಟು ಭಾರಿ ಮೊತ್ತವನ್ನು ಭರಿಸಲಾಗದೆ ರಹೀಮ್ ಕುಟುಂಬ ಕಣ್ಣೀರಲ್ಲಿ ಮುಳುಗಿದ್ದಾಗ, ಕೇರಳದ ಸಾರ್ವಜನಿಕರು ಹಾಗೂ ಪ್ರಪಂಚದಾದ್ಯಂತ ಇದ್ದ ಮಲಯಾಳಿ ಒಕ್ಕೂಟಗಳು ಸೇರಿ ಜಾಗತಿಕ ಮಟ್ಟದಲ್ಲಿ ಹಣ ಸಂಗ್ರಹಣೆಯ ಮಹಾ ಅಭಿಯಾನವನ್ನೇ ನಡೆಸಿದರು. ಕೆಲವೇ ದಿನಗಳಲ್ಲಿ ತಲಾ ಒಂದೊಂದು ರೂಪಾಯಿಯಂತೆ ಕ್ರೋಢೀಕರಿಸಿ ₹34 ಕೋಟಿ ರೂಪಾಯಿಯನ್ನು ಸೌದಿ ಕೋರ್ಟ್‌ಗೆ ಪಾವತಿಸಿ, ರಹೀಮ್‌ಗೆ ಕ್ಷಮಾದಾನ ಸಿಗುವಂತೆ ಮಾಡಲಾಗಿತ್ತು.


ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ತೀವ್ರ ಭಾವುಕರಾದ ಅಬ್ದುಲ್ ರಹೀಮ್, ತಮಗೆ ಜೀವದಾನ ನೀಡಿದ ಪ್ರತಿಯೊಬ್ಬರಿಗೂ ಕೈಮುಗಿದು ಧನ್ಯವಾದ ಅರ್ಪಿಸಿದರು. ಈ ಕುರಿತು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡ ರಹೀಮ್ ಸಹೋದರ, “ಸುಮಾರು 20 ವರ್ಷಗಳ ಕಾಯುವಿಕೆಗೆ ದೇವರ ದಯೆಯಿಂದ ಮುಕ್ತಿ ಸಿಕ್ಕಿದೆ. ಅವರ ಆಗಮನವು ಈದ್ ಅಲ್-ಅಧಾ ಹಬ್ಬದ ಸಂದರ್ಭದಲ್ಲೇ ಆಗಿರುವುದರಿಂದ ನಮ್ಮ ಮನೆಯಲ್ಲಿ ಎರಡೂ ಸಂತೋಷ ಒಟ್ಟಿಗೆ ಬಂದಿದೆ. ಸಾರ್ವಜನಿಕರು ಜಾಗೃತಿ ಮೂಡಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿಕೊಡದಿದ್ದರೆ ನನ್ನ ಸಹೋದರ ಇಂದು ನಮ್ಮೊಂದಿಗೆ ಇರುತ್ತಿರಲಿಲ್ಲ. ಜನರೇ ನಮಗೆ ದೇವರು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.


