ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ದೇಶದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಪ್ರತಿ ಶನಿವಾರ ರಜೆ ಘೋಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಕೇಂದ್ರ ಸರ್ಕಾರದ ಸತ್ಯಶೋಧನಾ ವಿಭಾಗವಾದ ‘ಪಿಐಬಿ ಫ್ಯಾಕ್ಟ್ ಚೆಕ್’ (PIB Fact Check) ಸ್ಪಷ್ಟಪಡಿಸಿದೆ.


ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದೆ ಎನ್ನಲಾದ ನಕಲಿ ಗೆಜೆಟ್ ಅಧಿಸೂಚನೆಯೊಂದನ್ನು ಉಲ್ಲೇಖಿಸಿ ಈ ಭ್ರಾಂತಿ ಸೃಷ್ಟಿಸಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರದ ಕುರಿತು ‘ಎಕ್ಸ್’ (X)ನಲ್ಲಿ ಪೋಸ್ಟ್ ಮಾಡಿರುವ ಪಿಐಬಿ ಫ್ಯಾಕ್ಟ್ ಚೆಕ್, “ಹಣಕಾಸು ಸಚಿವಾಲಯದ (ಹಣಕಾಸು ಸೇವೆಗಳ ಇಲಾಖೆ) ಹೆಸರಿನಲ್ಲಿ ನಕಲಿ ಗೆಜೆಟ್ ಅಧಿಸೂಚನೆಯೊಂದು ವೈರಲ್ ಆಗುತ್ತಿದೆ. ಇದರಲ್ಲಿ ಎಸ್‌ಬಿಐ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಪ್ರತಿ ಶನಿವಾರ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ, ಈ ದಾಖಲೆಯು ಸಂಪೂರ್ಣವಾಗಿ ನಕಲಿಯಾಗಿದೆ” ಎಂದು ತಿಳಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಪ್ರತಿ ಶನಿವಾರ ರಜೆ ನೀಡಿ ಹಣಕಾಸು ಸಚಿವಾಲಯ ಯಾವುದೇ ರೀತಿಯ ಅಧಿಸೂಚನೆ ಹೊರಡಿಸಿಲ್ಲ ಎಂದು ಇಲಾಖೆ ಅಧಿಕೃತವಾಗಿ ಖಚಿತಪಡಿಸಿದೆ.

ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳ ಒಕ್ಕೂಟವಾದ ‘ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್’ (UFBU) ಮುಖ್ಯ ಬೇಡಿಕೆಗಳಲ್ಲಿ ‘ವಾರದಲ್ಲಿ 5 ದಿನಗಳ ಕೆಲಸ ಮತ್ತು ಪ್ರತಿ ಶನಿವಾರ ರಜೆ’ ನೀಡುವುದು ಪ್ರಮುಖವಾಗಿತ್ತು. ಸೆಪ್ಟೆಂಬರ್ 28 ರಿಂದ 30 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಸಂಘಟನೆಗಳು ತಾತ್ಕಾಲಿಕವಾಗಿ ಮುಂದೂಡಿದ ಬೆನ್ನಲ್ಲೇ, ಈ ನಕಲಿ ವದಂತಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು. ಪ್ರಸ್ತುತ ಹಳೆಯ ನಿಯಮಾವಳಿಯಂತೆ ತಿಂಗಳ 2ನೇ ಮತ್ತು 4ನೇ ಶನಿವಾರ ಮಾತ್ರ ಬ್ಯಾಂಕುಗಳಿಗೆ ರಜೆ ಮುಂದುವರಿಯಲಿದೆ.

