ಮಧುರೈ: ತಿರುಪ್ಪರಂಕುಂಡ್ರಂ ದೀಪಸ್ತಂಭ ವಿವಾದ; ವಿಜಯ್ ನೇತೃತ್ವದ ಸರಕಾರದ ವಿರುದ್ದ ಸುಪ್ರೀಂ ಕೋರ್ಟ್ ಗರಂ, ಶನಿವಾರ ಕಾರ್ತಿಕ ದೀಪ ಬೆಳಗಿಸಲು ನಿರ್ದೇಶನ..!

Prakhara News
2 Min Read

ನವದೆಹಲಿ: ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ‘ದೀಪತ್ತೂಣ್’ (ದೀಪಸ್ತಂಭ) ಕಂಬದಲ್ಲಿ ಕಾರ್ತಿಕ ದೀಪ ಬೆಳಗಿಸುವಂತೆ ನೀಡಿದ್ದ ತನ್ನ ಆದೇಶವನ್ನು ಪಾಲಿಸಲು ವಿಫಲವಾದ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಹಾಗೂ ಮಧುರೈ ಜಿಲ್ಲಾಡಳಿತವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದು, ಸಿಆರ್ ಪಿಎಫ್‌ ಭದ್ರತೆಯಲ್ಲಿ ಶನಿವಾರ ಮತ್ತೆ ಕಾರ್ತಿಕ ದೀಪ ಬೆಳಗಿಸಲು ಸೂಚಿಸಿದೆ.

‘ಸಾಂವಿಧಾನಿಕ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುವವರನ್ನು ಸುಮ್ಮನೆ ಬಿಡುವುದಿಲ್ಲ; ಇಂತಹ ಪರಿಸ್ಥಿತಿಯನ್ನು ಉಕ್ಕಿನ ಹಸ್ತದಿಂದ ನಿಭಾಯಿಸುವ ಸಮಯ ಬಂದಿದೆ’’ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ. ತಿರುಪ್ಪರಂಕುಂಡ್ರಂ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಿಸದೆ ಸುಪ್ರೀಂಕೋರ್ಟ್ ಆದೇಶವನ್ನು ಗಾಳಿ ತೂರಿದ್ದ ತಮಿಳುನಾಡು ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ಪೀಠವು, ತಮಿಳುನಾಡಿನ ಅಧಿಕಾರಿಗಳು ತಮ್ಮ ‘‘ರಾಜಕೀಯ ಬಾಸ್‌ಗಳ ಆದೇಶದಂತೆ ವರ್ತಿಸಿದ್ದಾರೆ’’ ಎಂದು ಕಿಡಿಕಾರಿತು.

ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ತಿರುಪ್ಪರಂಕುಂಡ್ರಂನ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಧರ್ಮದರ್ಶಿ ಮಂಡಳಿಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ. ಅಲ್ಲದೆ, ದೇವಾಲಯದ ಆಡಳಿತವನ್ನು ನೋಡಿಕೊಳ್ಳಲು ಇಬ್ಬರು ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ನೇಮಿಸಿ ಆದೇಶಿಸಿದೆ.

ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸಾಧ್ಯವಾಗದ ಕಾರಣ, ನಾಳೆ ಅಂದರೆ ಶನಿವಾರ (ನವೆಂಬರ್ 28) ಅರ್ಚಕರೊಂದಿಗೆ ಸಮಾಲೋಚಿಸಿ ‘ದೀಪತ್ತೂಣ್’ ಕಂಬದ ಮೇಲೆ ಕಾರ್ತಿಕ ದೀಪ ಬೆಳಗಿಸುವಂತೆ ನ್ಯಾಯಾಲಯ ನೇಮಿಸಿದ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಪ್ರಕ್ರಿಯೆಗೆ ಅಗತ್ಯವಿದ್ದರೆ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಭದ್ರತೆ ನಿಯೋಜಿಸಲು ಹಾಗೂ ಸಮೀಪದ ದರ್ಗಾಕ್ಕೂ ಸೂಕ್ತ ರಕ್ಷಣೆ ನೀಡಲು ನ್ಯಾಯಪೀಠ ಸೂಚಿಸಿದೆ. ಇದೇ ವೇಳೆ, ಆದೇಶ ಪಾಲಿಸದ ಕಾರಣಕ್ಕಾಗಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರು, ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ, ಎಸ್‌ಪಿ ಹಾಗೂ ದೇವಾಲಯದ ಟ್ರಸ್ಟಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ.

ತಿರುಪ್ಪರಂಕುಂಡ್ರಂ ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಾಲಯದ ದೀಪ ಮಂಟಪದಲ್ಲಿ ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಕಾರ್ತಿಕ ದೀಪ ಬೆಳಗಿಸಲಾಗುತ್ತದೆ. ಆದರೆ, ಬೆಟ್ಟದ ಮೇಲ್ಭಾಗದಲ್ಲಿ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿರುವ ‘ದೀಪತ್ತೂಣ್’ ಕಲ್ಲಿನ ಕಂಬದ ಮೇಲೂ ದೀಪ ಬೆಳಗಿಸಲು ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಕೋರಿದ್ದವು. ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಒಂದು ಬಾರಿಯ ಮಧ್ಯಂತರ ವ್ಯವಸ್ಥೆಯಾಗಿ ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ, ದೇವಾಲಯದ ಟ್ರಸ್ಟ್ ಅನುಮತಿ ನಿರಾಕರಿಸಿದೆ ಎಂಬ ನೆಪವೊಡ್ಡಿ ಜಿಲ್ಲಾಡಳಿತ ಅಲ್ಲಿ ದೀಪ ಬೆಳಗಿಸಿರಲಿಲ್ಲ. ಇದು ತೀವ್ರ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿತ್ತು.

Share This Article
Leave a Comment