ಕುಂದಾಪುರ: ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟೊಂದು ಬುಧವಾರ ಗಂಗೊಳ್ಳಿ ಅಳಿವೆ ಪ್ರದೇಶದ ಸಮುದ್ರದಲ್ಲಿ ಮುಳುಗಡೆಯಾದ ಭೀಕರ ಘಟನೆ ಸಂಭವಿಸಿದೆ. ಬೋಟಿನಲ್ಲಿದ್ದ ಎಲ್ಲಾ 27 ಮಂದಿ ಮೀನುಗಾರರನ್ನು ಸಕಾಲದಲ್ಲಿ ರಕ್ಷಿಸಲಾಗಿದ್ದು, ಬೋಟ್ ಮುಳುಗಡೆಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.


ಭಟ್ಕಳ ಮುಂಡಳ್ಳಿ ಮೂಲದ ನಾಗರಾಜ ಮೊಗೇರ ಅವರಿಗೆ ಸೇರಿದ ‘ಶ್ರೀ ಬಾಲಾಂಜನೇಯ’ ಹೆಸರಿನ ಪರ್ಸಿನ್ ಬೋಟಿನಲ್ಲಿ 27 ಮಂದಿ ಮೀನುಗಾರರು ಬುಧವಾರ ಗಂಗೊಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದರು. ಗಂಗೊಳ್ಳಿ ಬಂದರಿನಿಂದ ಅನತಿ ದೂರದಲ್ಲಿರುವ ಅಪಾಯಕಾರಿ ಅಳಿವೆ ಪ್ರದೇಶವನ್ನು ತಲುಪುತ್ತಿದ್ದಂತೆ ಭಾರಿ ಅಲೆಗಳ ಹೊಡೆತಕ್ಕೆ ಬೋಟಿನೊಳಗೆ ನೀರು ನುಗ್ಗಲಾರಂಭಿಸಿತು.
ಬೋಟ್ ಮುಳುಗುವ ಅಪಾಯದ ಮುನ್ಸೂಚನೆ ಅರಿತ ಮೀನುಗಾರರು ತಕ್ಷಣವೇ ಗಂಗೊಳ್ಳಿ ಬಂದರಿನಲ್ಲಿದ್ದ ಇತರ ಬೋಟ್ಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಮೀನುಗಾರರು ಹಾಗೂ ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರು ಎರಡು ಬೋಟ್ಗಳಲ್ಲಿ ಸಮುದ್ರಕ್ಕೆ ಧಾವಿಸಿ, ಅಪಾಯದಲ್ಲಿದ್ದ ಎಲ್ಲಾ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ಅಲೆಗಳ ಅಬ್ಬರ ಹೆಚ್ಚಾಗಿದ್ದರಿಂದ ಬೋಟ್ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಬೆಲೆಬಾಳುವ ಬಲೆಗಳು ಹಾಗೂ ಮೀನುಗಾರಿಕಾ ಸಲಕರಣೆಗಳು ಸಮುದ್ರಪಾಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಭಾಗಶಃ ಮುಳುಗಿರುವ ಬೋಟನ್ನು ದಡಕ್ಕೆ ಎಳೆದು ತರಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

