ಹಿಜಾಬ್ ಧರಿಸದೆ ಹಾಡು ಹಾಡಿದ ಗಾಯಕಿ ಪರಸ್ತೂ ಅಹ್ಮದಿಗೆ 74 ಚಾಟಿ ಏಟು ಶಿಕ್ಷೆ ಜಾರಿ..!

Prakhara News
1 Min Read

ಟೆಹ್ರಾನ್: ಹಿಜಾಬ್ ಧರಿಸದೆ ಯೂಟ್ಯೂಬ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಹಾಡಿದ ಕಾರಣಕ್ಕಾಗಿ, ಇರಾನ್‌ನ 29 ವರ್ಷದ ಖ್ಯಾತ ಗಾಯಕಿ ಪರಸ್ತೂ ಅಹ್ಮದಿ ಅವರಿಗೆ ವಿಧಿಸಲಾಗಿದ್ದ 74 ಚಾಟಿ ಏಟುಗಳ ಶಿಕ್ಷೆಯನ್ನು ಅಲ್ಲಿನ ಅಧಿಕಾರಿಗಳು ಜಾರಿಗೊಳಿಸಿದ್ದಾರೆ.

ಗಾಯಕಿಯ ಪರ ವಕೀಲರು ಈ ವಿಷಯವನ್ನು ಬಹಿರಂಗಪಡಿಸಿದ್ದು, ಇರಾನ್ ಆಡಳಿತದ ಈ ಕಠಿಣ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ಹಾಗೂ ಖಂಡನೆ ವ್ಯಕ್ತವಾಗಿದೆ. ಇರಾನ್‌ನ ಸಾಂಪ್ರದಾಯಿಕ ಹಾಗೂ ಜಾನಪದ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪರಸ್ತೂ ಅಹ್ಮದಿ ಅವರಿಗೆ ಸಂಗೀತದ ಬಗ್ಗೆ ಅಪಾರ ಒಲವು. ಇದರ ಭಾಗವಾಗಿ 2024ರ ಡಿಸೆಂಬರ್‌ನಲ್ಲಿ ಅವರು ವಿಶೇಷ ವರ್ಚುವಲ್ ಸಂಗೀತ ಪ್ರದರ್ಶನವೊಂದನ್ನು ಚಿತ್ರೀಕರಿಸಿ ಯೂಟ್ಯೂಬ್‌ನಲ್ಲಿ ಪ್ರಕಟಿಸಿದ್ದರು.

ಪುರಾತನ ಕಟ್ಟಡವೊಂದರ ಆವರಣದಲ್ಲಿ ಯಾವುದೇ ಪ್ರೇಕ್ಷಕರಿಲ್ಲದೆ ಚಿತ್ರೀಕರಿಸಲಾಗಿದ್ದ ಈ ವಿಡಿಯೋದಲ್ಲಿ, ಪರಸ್ತೂ ಅವರು ಉದ್ದನೆಯ ಕಪ್ಪು ಗೌನ್ ಧರಿಸಿ ಹಾಡಿದ್ದರು. ಆದರೆ, ಅವರ ತಲೆಯ ಮೇಲೆ ಹಿಜಾಬ್ ಇರಲಿಲ್ಲ. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಅವರೊಂದಿಗೆ ನಾಲ್ವರು ಪುರುಷ ಸಂಗೀತಗಾರರು ಕೂಡ ಸಾಥ್ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿ ಜಾಗತಿಕ ಗಮನ ಸೆಳೆದಿತ್ತು.
ಇರಾನ್‌ನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಹಾಗೂ ಪುರುಷ ಪ್ರೇಕ್ಷಕರ ಮುಂದೆ ಅಥವಾ ಏಕಾಂಗಿಯಾಗಿ ಹಾಡಬಾರದು ಎಂಬ ಕಠಿಣ ಕಾನೂನುಗಳಿವೆ. ಈ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಹ್ಮದಿ ವಿರುದ್ಧ ಪ್ರಕರಣ ದಾಖಲಿಸಿ, 74 ಚಾಟಿ ಏಟುಗಳ ಶಿಕ್ಷೆ ವಿಧಿಸಲಾಗಿತ್ತು.

2022ರ ಸೆಪ್ಟೆಂಬರ್‌ನಲ್ಲಿ ಹಿಜಾಬ್ ನಿಯಮ ಉಲ್ಲಂಘನೆ ಆರೋಪದಡಿ ಬಂಧಿತರಾಗಿದ್ದ ಮಹ್ಸಾ ಅಮಿನಿ ಎಂಬ ಯುವತಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಬಳಿಕ ಇರಾನ್‌ನಲ್ಲಿ ಭಾರಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದೀಗ ಗಾಯಕಿ ಪರಸ್ತೂ ಅಹ್ಮದಿ ಅವರಿಗೆ ಚಾಟಿ ಏಟು ಶಿಕ್ಷೆ ಜಾರಿಗೊಳಿಸಿರುವುದು ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಕಲಾವಿದರ ಕೆಂಗಣ್ಣಿಗೆ ಗುರಿಯಾಗಿದೆ.

Share This Article
Leave a Comment