ಪಾಕಿಸ್ತಾನ – ಶುಕ್ರವಾರ ಪ್ರಾರ್ಥನೆ ವೇಳೆ ಮಸೀದಿ ಮೇಲೆ ಕಾರು ಬಾಂಬ್ ಡಿಕ್ಕಿ, 15 ಪೊಲೀಸರು ಸೇರಿ 27 ಮಂದಿ ಸಾವು..!

Prakhara News
1 Min Read

ಪೇಶಾವರ: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಭಾರಿ ಉಗ್ರರ ದಾಳಿ ನಡೆದಿದ್ದು, ಮಸೀದಿಯೊಂದರೊಳಗೆ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿ ನಡೆಸಿದ ಭೀಕರ ಬಾಂಬ್ ಸ್ಫೋಟದಲ್ಲಿ 15 ಪೊಲೀಸ್ ಅಧಿಕಾರಿಗಳು ಸೇರಿ ಕನಿಷ್ಠ 27 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಶುಕ್ರವಾರ ಪ್ರಾರ್ಥನೆ ವೇಳೆ ನಡೆದ ಈ ದಾಳಿಯಲ್ಲಿ 78ಕ್ಕೂ ಹೆಚ್ಚು ಭಕ್ತರು ಹಾಗೂ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೋಹಾಟ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಪೊಲೀಸ್ ಕಚೇರಿಗಳ ಸಂಕೀರ್ಣದಲ್ಲಿದ್ದ ಮಸೀದಿಗೆ ದಾಳಿಕೋರನು ಸ್ಫೋಟಕ ತುಂಬಿದ ವಾಹನವನ್ನು ವೇಗವಾಗಿ ತಂದು ಡಿಕ್ಕಿ ಹೊಡೆಸಿದ್ದಾನೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಜುಲ್ಫಿಕರ್ ಹಮೀದ್ ಸ್ಪಷ್ಟಪಡಿಸಿದ್ದಾರೆ. ದಾಳಿಯ ರಭಸಕ್ಕೆ ಪೊಲೀಸ್ ಕಚೇರಿಯ ಹೊರ ಗೋಡೆ ಸಂಪೂರ್ಣ ಕುಸಿದುಬಿದ್ದಿದ್ದು, ಮಸೀದಿಯ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಇದೇ ವೇಳೆ ಇಬ್ಬರು ಸಶಸ್ತ್ರ ಉಗ್ರರು ಪೊಲೀಸ್ ಆವರಣಕ್ಕೆ ನುಗ್ಗಲು ಯತ್ನಿಸಿದ್ದು, ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.

ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಬಹುತೇಕರು ಶುಕ್ರವಾರದ ಪ್ರಾರ್ಥನೆಗೆ ಆಗಮಿಸಿದ್ದವರಾಗಿದ್ದರು , ಹಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಅಧ್ಯಕ್ಷರು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಗುರುವಾರವಷ್ಟೇ ವಾಯುವ್ಯ ಹಂಗು ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ರಸ್ತೆಬದಿಯ ಬಾಂಬ್ ದಾಳಿ ನಡೆಸಿ ಆರು ಸೈನಿಕರನ್ನು ಕೊಲ್ಲಲಾಗಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಮಿಲಿಟರಿ ನಡೆಸಿದ ಕಾರ್ಯಾಚರಣೆಯಲ್ಲಿ 10 ಉಗ್ರರು ಹತರಾಗಿದ್ದರು. ಇದರ ಬೆನ್ನಲ್ಲೇ ಈ ಪ್ರತೀಕಾರದ ದಾಳಿ ನಡೆದಿದೆ.

ಪಾಕಿಸ್ತಾನಿ ತಾಲಿಬಾನ್ (TTP) ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ.

Share This Article
Leave a Comment