ಶಿರ್ವ: ದೇವಸ್ಥಾನದ ದೀಪೋತ್ಸವಕ್ಕೆ ಬಂದಿದ್ದ ವೃದ್ಧನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ-ಆರೋಪಿಯ ಬಂಧನ..!

Prakhara News
2 Min Read

ಶಿರ್ವ: ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ 68 ವರ್ಷದ ವೃದ್ಧರೊಬ್ಬರನ್ನು ಪರಿಚಯಸ್ಥ ವ್ಯಕ್ತಿಯೇ ಮಾತುಕತೆಯ ನೆಪದಲ್ಲಿ ಹೊರಗೆ ಕರೆದೊಯ್ದು, ಕಾರಿನಲ್ಲಿ ಸುತ್ತಿಗೆಯಿಂದ ಹಲ್ಲೆ ನಡೆಸಿ ₹4.50 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಕುಂಜಾರುಗಿರಿಯಲ್ಲಿ ನಡೆದಿದೆ. ಬೆಳ್ಳೆ ಗ್ರಾಮದ ಪಡುಬೆಳ್ಳೆ ನಿವಾಸಿ ಬಿ. ರಾಜಮೂರ್ತಿ ಭಟ್ (68) ಹಲ್ಲೆಗೊಳಗಾಗಿ ಚಿನ್ನಾಭರಣ ಕಳೆದುಕೊಂಡವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಂಗಳವಾರ ನವೆಂಬರ್ 24 ಸಂಜೆ ರಾಜಮೂರ್ತಿ ಭಟ್ ಅವರು ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಅವರ ಪರಿಚಯಸ್ಥ ಆರೋಪಿಯು ರಾತ್ರಿ 8.30ರ ಸುಮಾರಿಗೆ ಭಟ್ ಅವರ ಬಳಿ ಬಂದು, ‘‘ನಿಮ್ಮೊಂದಿಗೆ ಸ್ವಲ್ಪ ಮಾತನಾಡುವುದಿದೆ’’ ಎಂದು ಹೇಳಿ ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಕಾರಿನಲ್ಲಿ ಅವರನ್ನು ಕುಳ್ಳಿರಿಸಿಕೊಂಡ ಆರೋಪಿ, ‘‘ನಾನು ಸುಮಾರು 60 ಎಕರೆ ಜಾಗದಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದೇನೆ. ಅದನ್ನು 200 ಎಕರೆಗೆ ವಿಸ್ತರಿಸಲು ₹25 ಲಕ್ಷ ಹಣದ ಅಗತ್ಯವಿದೆ, ಸಹಾಯ ಮಾಡಿ’’ ಎಂದು ಕೇಳಿದ್ದಾನೆ. ಇದಕ್ಕೆ ರಾಜಮೂರ್ತಿ ಭಟ್ ನಿರಾಕರಿಸಿದ್ದಾರೆ.

ಹಣ ನೀಡಲು ಒಪ್ಪದಿದ್ದಾಗ ಆರೋಪಿಯು ಅವರ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ದೋಚುವ ಉದ್ದೇಶದಿಂದ ಕಾರಿನಲ್ಲಿದ್ದ ಸುತ್ತಿಗೆಯಿಂದ ಭಟ್ ಅವರ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಭಯಭೀತರಾದ ಭಟ್ ಅವರು ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಬೆನ್ನಟ್ಟಿ ಅವರನ್ನು ಕೆಳಕ್ಕೆ ದೂಡಿದ್ದಾನೆ. ಬಳಿಕ ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದಾನೆ. ದೋಚಲಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ₹4.50 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ಪಡುಬೆಳ್ಳೆ ನಿವಾಸಿ ಮುರಳಿಕೃಷ್ಣ ಉಪಾಧ್ಯಾಯ (47) ಬಂಧಿತ ಆರೋಪಿ.

Share This Article
Leave a Comment