ಉಳ್ಳಾಲ : ಕೋಟೆಪುರ ಅಳಿವೆಬಾಗಿಲು ಸಮುದ್ರ ತೀರದಲ್ಲಿ ಯುವಕನ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಆಗಸ್ಟ್ 9 ರಂದು ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ದೊಡ್ಡ ಗಾತ್ರದ ಅಲೆಗೆ ಸಿಲುಕಿ ಸಮುದ್ರಪಾಲಾಗಿದ್ದ ಕುಂದಾಪುರ ಮೂಲದ ಮೀನುಗಾರ ನಾರಾಯಣ (31) ಅವರ ಮೃತದೇಹವೇ ಇದಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


ಆಗಸ್ಟ್ 9 ರಂದು ಉಳ್ಳಾಲ ಮೂಲದ ‘ಓಷಿಯನ್ ಸ್ಟಾರ್’ ಹೆಸರಿನ ಬೋಟ್‌ನಲ್ಲಿ ಮಂಗಳೂರು ಧಕ್ಕೆಯಿಂದ ಮೀನುಗಾರಿಕೆಗೆ ತೆರಳುತ್ತಿದ್ದಾಗ, ಬೋಟ್‌ಗೆ ಅಲೆ ಬಡಿದು ಕುಂದಾಪುರ ನಿವಾಸಿ ನಾರಾಯಣ ಸಮುದ್ರದ ಪಾಲಾಗಿದ್ದರು. ಈ ಸಂಬಂಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಇದೀಗ ಉಳ್ಳಾಲ ಕೋಟೆಪುರ ಸಮೀಪ ಪತ್ತೆಯಾಗಿರುವ ಶವ ನಾರಾಯಣ ಅವರದ್ದೇ ಇರಬಹುದು ಎನ್ನಲಾಗಿದ್ದು, ಶವಮಹಜರು ಹಾಗೂ ವಾರಸುದಾರರ ಗುರುತಿಸುವಿಕೆಯ ನಂತರವಷ್ಟೇ ಅಧಿಕೃತವಾಗಿ ತಿಳಿದುಬರಬೇಕಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.



