ದೈವಗಳ ಮೂರ್ತಿ, ಕಡ್ನಲೆ ಕದ್ದವರು ಅರೆಸ್ಟ್: ಜನರಿಲ್ಲದ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ರೌಡಿಶೀಟರ್

Prakhara News
1 Min Read

ಮಂಗಳೂರು : ಭಕ್ತಿಯ ಕೇಂದ್ರವಾದ ದೈವಸ್ಥಾನದ ಪೂಜಾ ಪರಿಕರಗಳನ್ನು ಕದ್ದುಕೊಂಡು ಹೋಗಿದ್ದ ಕಳ್ಳರಿಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಮನೆಯ ಛಾವಣಿಯ ಹಂಚು ತೆಗೆದು ಒಳನುಗ್ಗಿ, ದೈವಗಳ ಮೂರ್ತಿ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದ ಅನ್ಯಮತೀಯ ಕಳ್ಳರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕುಳಾಯಿ ಗ್ರಾಮದ ಅಮಿತಾ ಎಂಬವರ ತಾಯಿ ಮನೆಯಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು. ಆದರೆ ಮನೆಯಲ್ಲಿ ಯಾರೂ ಖಾಯಂ ವಾಸವಿಲ್ಲ. ಜನ ವಾಸವಿಲ್ಲದ ಈ ಮನೆಯನ್ನೇ ಗುರಿಯಾಗಿಸಿಕೊಂಡ ಕಳ್ಳರು ಕಳೆದ ಡಿ.26ರ ರಾತ್ರಿ ಹೆಂಚು ತೆಗೆದು ಒಳ ಪ್ರವೇಶಿಸಿ ಪೊಸಪ್ಪೆ ದೈವ, ಮಂತ್ರದೇವತೆ, ಕಲ್ಲುರ್ಟಿ ಪಂಜುರ್ಲಿ ದೈವಗಳ ಮೂರ್ತಿಗಳು, ಬೆಳ್ಳಿಯ ಕಡ್ನಲೆ (ಖಡ್ಗ), ಘಂಟೆ ಹಾಗೂ ಎಲ್.ಇ.ಡಿ ಟಿವಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದರು.

ಪ್ರಕರಣ ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ಸಿಸಿಟಿವಿ ಹಾಗೂ ತಾಂತ್ರಿಕ ತನಿಖೆ ನಡೆಸಿದಾಗ ಸಿಕ್ಕಿಬಿದ್ದವನೇ ವಾಜೀದ್ ಜೆ @ ವಾಜಿ (27). ಈತ ಸಾಮಾನ್ಯ ಕಳ್ಳನಲ್ಲ, ಸುರತ್ಕಲ್ ಠಾಣೆಯ ‘ಬಿ’ ರೌಡಿ ಶೀಟ‌ರ್. ಮಂಗಳೂರು, ಉಡುಪಿ, ಹಾಸನ ಸೇರಿದಂತೆ ವಿವಿಧೆಡೆ ಕೊಲೆಯತ್ನ, ದರೋಡೆ, ದನ ಕಳ್ಳತನ ಸೇರಿದಂತೆ ಬರೋಬ್ಬರಿ 16ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಭೂಪ.

ವಾಜೀದ್‌ ನೀಡಿದ ಮಾಹಿತಿಯ ಮೇರೆಗೆ ಕದ್ದ ತಾಮ್ರ ಹಾಗೂ ಹಿತ್ತಾಳೆ ಸಾಮಗ್ರಿಗಳನ್ನು ಖರೀದಿ ಮಾಡಿದ್ದ ಜೋಕಟ್ಟೆಯ ಸಯ್ಯದ್ ಆಲಿ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಒಟ್ಟು 1,95,000 ರೂ. ಮೌಲ್ಯದ ಬೆಳ್ಳಿಯ ಮಂತ್ರದೇವತೆ ಮೂರ್ತಿ, ಕೊಡೆ, ಕಡ್ನಲೆ.

ಹಿತ್ತಾಳೆ ಹಾಗೂ ತಾಮ್ರದ ಪೂಜಾ ಪರಿಕರಗಳು, ಟಿವಿ, ಸೆಟ್ ಆಪ್ ಬಾಕ್ಸ್ ಹಾಗೂ ಕಳ್ಳತನದ ಸ್ಕೂಟ‌ರ್ ವಶಪಡಿಸಿಕೊಳ್ಳಲಾಗಿದೆ.

ದೈವಗಳ ಸೊತ್ತನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಈ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ದೈವದ ಶಾಪವೋ ಅಥವಾ ಪೊಲೀಸರ ಚಾಕಚಕ್ಯತೆಯೋ, ಒಟ್ಟಿನಲ್ಲಿ ಕಳ್ಳರು ಈಗ ಜೈಲು ಪಾಲಾಗಿದ್ದಾರೆ.

Share This Article
Leave a Comment