ಉಡುಪಿ: ಜನಗಣತಿ ನೆಪದಲ್ಲಿ ವೃದ್ಧೆಯ ಮನೆಗೆ ನುಗ್ಗಿ ಚಿನ್ನದ ಸರ ಕಳವು; ಮಣಿಪಾಲದಲ್ಲಿ ಇಬ್ಬರು ಆರೋಪಿಗಳ ಬಂಧನ, ₹5.53 ಲಕ್ಷ ಮೌಲ್ಯದ ಸೊತ್ತು ಜಪ್ತಿ..!

Prakhara News
1 Min Read

ಉಡುಪಿ: ಉಡುಪಿ ನಗರದ ನಿಟ್ಟೂರಿನಲ್ಲಿ ಒಂಟಿಯಾಗಿ ವಾಸವಿದ್ದ 74 ವರ್ಷದ ವೃದ್ಧೆಯೊಬ್ಬರ ಮನೆಗೆ ಜನಗಣತಿ (SIR) ಮಾಹಿತಿ ಕೇಳುವ ನೆಪದಲ್ಲಿ ನುಗ್ಗಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದ ಕುಖ್ಯಾತ ಕಳ್ಳರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 10, 2026 ರಂದು ಮಣಿಪಾಲದ ಮಣ್ಣಪಳ್ಳದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಅಕ್ಟೋಬರ್ 7, 2026 ರಂದು ನಿಟ್ಟೂರಿನಲ್ಲಿ ಒಂಟಿಯಾಗಿ ವಾಸವಾಗಿದ್ದ 74 ವರ್ಷದ ಶಾಂತಾ ಕಾರಂತ್ ಅವರ ಮನೆಗೆ ಇಬ್ಬರು ವ್ಯಕ್ತಿಗಳು ಬಂದಿದ್ದರು. ಜನಗಣತಿ (SIR) ಮಾಹಿತಿ ಸಂಗ್ರಹಿಸುವ ನೆಪದಲ್ಲಿ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು, ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಆಘಾತಕಾರಿ ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2026, ಬಿಎನ್‌ಎಸ್ (BNS) ಕಾಯ್ದೆ ಕಲಂ 309(4) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಉಡುಪಿ ನಗರ ಠಾಣೆಯ ಪೊಲೀಸರು, ಸುಳಿವು ಆಧರಿಸಿ ಅಕ್ಟೋಬರ್ 10 ರಂದು ಮಣಿಪಾಲದ ಮಣ್ಣಪಳ್ಳದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ವಾದಿರಾಜ್ ಗಾಣಿಗ (44) ಮತ್ತು ಸಚಿನ್ (30) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಪೊಲೀಸರು ಭಾರಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ:
₹4,50,000 ಮೌಲ್ಯದ ಚಿನ್ನದ ಸರ, ₹90,000 ಮೌಲ್ಯದ ಓಲಾ ಎಲೆಕ್ಟ್ರಿಕ್ ಸ್ಕೂಟರ್ (OLA Electric Scooter), ₹13,000 ಮೌಲ್ಯದ ಎರಡು ಮೊಬೈಲ್ ಫೋನ್‌ಗಳು, ಸೇರಿದಂತೆ ಒಟ್ಟು ₹5,53,000 ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಸಾಲ ತೀರಿಸುವ ಉದ್ದೇಶದಿಂದ ಹಾಗೂ ಐಷಾರಾಮಿ ಜೀವನ ನಡೆಸುವ ಆಸೆಯಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Share This Article
Leave a Comment