ಹನಿ ಮಂಗಳೂರು ಪ್ರಕರಣಕ್ಕೂ ನವಸಹಜ ಸಮುದಾಯ ಸಂಘಟನೆಗೂ ಯಾವುದೇ ಸಂಬಂಧವಿಲ್ಲ : ಸಮಗ್ರ ತನಿಖೆ ನಡೆಯಲಿ – ನಿಖಿಲಾ

Prakhara News
2 Min Read
Oplus_2

ಮಂಗಳೂರು : ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆಗಳನ್ನು ಖಂಡಿಸಿ ‘ನವಸಹಜ ಸಮುದಾಯ ಸಂಘಟನೆ’ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿತು.ನಕಲಿ ಗುರುತಿನ ಚೀಟಿ ಪಡೆದವರ ವಿರುದ್ಧ ಹಾಗೂ ಅದಕ್ಕೆ ಸಹಕರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.

ದ.ಕ ಜಿಲ್ಲಾ ನವಸಹಜ ಸಂಘಟನೆಯ ಅಧ್ಯಕ್ಷೆ ನಿಖಿಲಾ ಮಾತನಾಡಿ, “ರಾಯಚೂರು ಮೂಲದ ಹನಿ ಮಂಗಳೂರು ಕಳೆದ 4-5 ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಮೈಸೂರಿನ ವ್ಯಕ್ತಿಯನ್ನು ನಗರಕ್ಕೆ ಕರೆಸಿಕೊಂಡಿದ್ದಾಳೆ. ಸಂಘಟನೆಗೆ ಮಾಹಿತಿ ನೀಡದೆ ಆ ವ್ಯಕ್ತಿಗೆ ಮಂಗಳೂರಿನ ವಿಳಾಸದಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಮಹಿಳಾ ಅಭಿವೃದ್ಧಿ ನಿಗಮಕ್ಕೆ ತಪ್ಪು ಮಾಹಿತಿ ನೀಡಿ ರಾಷ್ಟ್ರೀಯ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ಮಾಡಿಸಲಾಗಿದೆ. ಬಳಿಕ ಆ ವ್ಯಕ್ತಿ ಮೈಸೂರಿಗೆ ತೆರಳಿ, ಮಂಗಳೂರಿನ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೂ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ,” ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ 50 ಮಂದಿಗೆ ಟಿಜಿ ಕಾರ್ಡ್ ವಿತರಿಸಿರುವ ಮಾಹಿತಿ ತಿಳಿದುಬಂದಿದ್ದು, ಅವುಗಳಲ್ಲಿ ಅನೇಕವು ನಕಲಿಯಾಗಿರುವ ಅನುಮಾನವಿದೆ ಎಂದ ಅವರು, “ನೈಜ ಮಂಗಳಮುಖಿಯರಿಗೆ ಇದರಿಂದ ಅನ್ಯಾಯವಾಗುತ್ತಿದೆ. ಭಿಕ್ಷಾಟನೆ ಮೂಲಕ ಸುಲಭವಾಗಿ ಹಣ ಸಂಪಾದಿಸಲು ಕೆಲವರು ನಕಲಿ ಕಾರ್ಡ್‌ಗಳನ್ನು ಮಾಡಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳು ಮತ್ತು ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸೂಚನೆ ನೀಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ಹೊರ ಜಿಲ್ಲೆಗಳ ಹಾಗೂ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗಿದ್ದು, ಕೆಲವರು ಮಂಗಳಮುಖಿಯರ ವೇಷದಲ್ಲಿ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ನಡೆಸುತ್ತಿರುವುದು ಕಂಡುಬರುತ್ತಿದೆ. ಇವರನ್ನು ಒಬ್ಬ ‘ಗುರು’ ಸಂಘಟಿತವಾಗಿ ನಡೆಸುತ್ತಿರುವ ಶಂಕೆಯಿದೆ. ಕೆಲವರು ಕುಟುಂಬವಿದ್ದರೂ ಟಿಜಿ ಕಾರ್ಡ್ ಪಡೆದಿರುವುದು ಗಮನಕ್ಕೆ ಬಂದಿದೆ. ಇದರಿಂದ ನೈಜ ಸಮುದಾಯದವರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ನಿಖಿಲಾ ಅಸಮಾಧಾನ ವ್ಯಕ್ತಪಡಿಸಿದರು.

ಹನಿ ನಮ್ಮ ಸಂಘಟನೆಯ ಬೋರ್ಡ್ ಸದಸ್ಯೆಯಾಗಿದ್ದರೂ, ನಂಜನಗೂಡಿನ ವ್ಯಕ್ತಿಗೆ ಗುರುತಿನ ಚೀಟಿ ಮಾಡಿಸಿದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾಳೆ. ಆಕೆಯ ಅಕ್ರಮಕ್ಕೆ ಸಹಕರಿಸಿದವರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಗುರುತಿನ ಚೀಟಿ ಕಳೆದುಹೋಗಿದೆ ಎಂಬ ಆಕೆಯ ಹೇಳಿಕೆ ಸುಳ್ಳಾಗಿದ್ದು, ಕಳೆದುಹೋಗಿದ್ದರೆ ದೂರು ನೀಡಬೇಕಾಗಿತ್ತು ಎಂದು ಅವರು ಹೇಳಿದರು. ಯಾರೊಬ್ಬರೂ ಮಾಡಿದ ತಪ್ಪಿಗೆ ಇಡೀ ಸಮುದಾಯ ಬಲಿಯಾಗಬಾರದು. ದಕ್ಷಿಣ ಕನ್ನಡ ಜಿಲ್ಲೆಯ ನೈಜ ಮಂಗಳಮುಖಿಯರಿಗೆ ನ್ಯಾಯ ಸಿಗಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ಅರುಂಧತಿ, ಪ್ರೇಮಾ, ಖುಷಿ, ವೃಂದಾ ಹಾಗೂ ದೀಕ್ಷಾ ಮಂಗಳೂರು ಉಪಸ್ಥಿತರಿದ್ದರು.

Share This Article
Leave a Comment