ಕಾರ್ಕಳ : “ಎಚ್ಚರಿಕೆ ನೀಡಿದ್ದರೂ ಅಪಾಯಕಾರಿ ಮರ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಹೆಬ್ರಿಯ ಮೂರು ರಸ್ತೆ ಹತ್ತುರ್ಕೆ ಬಳಿ ಕಾರಿನ ಮೇಲೆ ಮರ ಬಿದ್ದು ಪ್ರಗತಿಪರ ಕೃಷಿಕ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಸಾವಿಗೆ ನೇರವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ!” ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಗೂ ಮುನ್ನ ಸಚಿವರು ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇಡ್ಮೆಯಲ್ಲಿ ಭೂಕುಸಿತ ಸಂಭವಿಸಬಹುದಾದ ಪ್ರದೇಶಕ್ಕೆ ಭೇಟಿ ನೀಡಿ ಸಂಕಷ್ಟದಲ್ಲಿರುವ ಎರಡು ಕುಟುಂಬಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

“ನಿನ್ನೆ ಹೆಬ್ರಿಯಲ್ಲಿ ಮರ ಬಿದ್ದು ಕೃಷಿಕ ಮೃತರಾಗಿದ್ದಾರೆ, ಅದಕ್ಕೆ ಮುಂಚೆ ಬೆಳಂಜೆಯಲ್ಲೂ ಇದೇ ರೀತಿ ನಡೆದಿತ್ತು. ಇಲಾಖೆಗಳಿಗೆ ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರೂ ಮರ ತೆರವು ಮಾಡಲಿಲ್ಲ. ಅಡಚಣೆ ತರುವ ಕೊಂಬೆಗಳನ್ನು ಕಡಿಯಲು ಮೀನಮೇಷ ಎಣಿಸುವುದೇಕೆ? ನಿಮ್ಮ ನಿರ್ಲಕ್ಷ್ಯಕ್ಕೆ ಈಗ ಆ ಮೃತರ ಕುಟುಂಬಕ್ಕೆ ಏನು ಉತ್ತರ ನೀಡುತ್ತೀರಿ?” ಎಂದು ಅರಣ್ಯ, ಲೋಕೋಪಯೋಗಿ ಮತ್ತು ಮೆಸ್ಕಾಂ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, “ಮಳೆಗಾಲಕ್ಕೂ ಮುನ್ನವೇ ಅಪಾಯಕಾರಿ ಮರಗಳ ಬಗ್ಗೆ ಗಮನಕ್ಕೆ ತಂದರೂ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ” ಎಂದು ಆರೋಪಿಸಿದರು.
ಮುದರಂಗಡಿಯಲ್ಲಿ ನಡೆದ ಉದ್ಯಮಿ ಪ್ರಿನ್ಸ್ ಡೇವಿಡ್ ಶೂಟೌಟ್ ಪ್ರಕರಣದ ಕೇವಲ 12 ಗಂಟೆಗಳಲ್ಲಿ ಉತ್ತರ ಭಾರತದ ಶಾರ್ಪ್ ಶೂಟರ್ಗಳನ್ನು ಬಂಧಿಸಿದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯನ್ನು ಹಾಗೂ ಸಭೆಯಲ್ಲಿದ್ದ ಎಸ್ಪಿ ಹರಿರಾಮ್ ಶಂಕರ್ ಅವರನ್ನು ಸಚಿವ ಯು.ಟಿ. ಖಾದರ್ ಸಭೆಯ ಪರವಾಗಿ ಮುಕ್ತಕಂಠದಿಂದ ಅಭಿನಂದಿಸಿದರು.


