ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಿದ ಭರ್ಜರಿ ಅನುದಾನಗಳು ಕೇವಲ ಮೂಗಿಗೆ ಸವರಿದ ತುಪ್ಪ ಎಂಬುದು ರಾಜ್ಯ ಹಣಕಾಸು ಇಲಾಖೆಯು ಸ್ವತಃ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಮೂಲಕ ಸಾಬೀತಾಗಿದೆ. ಬೊಕ್ಕಸ ಖಾಲಿಯಾಗಿದ್ದರೂ ಕೇವಲ ಪ್ರಚಾರಕ್ಕಾಗಿ ಸುಳ್ಳು ಆಶ್ವಾಸನೆ ನೀಡಿರುವುದನ್ನು ಕರಾವಳಿಯ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ಆರ್ಥಿಕ ಇಲಾಖೆಯು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ “ಆರ್ಥಿಕತೆ ಪರಿಸ್ಥಿತಿ ಸರಿ ಇಲ್ಲ, ಈಗಾಗಲೇ ಘೋಷಿತ ಯೋಜನೆಗಳಿಗೆ ಅನುದಾನ ಕೊರತೆ ಇದೆ. ಹಾಗಾಗಿ ಇನ್ನು ಮುಂದೆ ಯಾವುದೇ ಹೊಸ ಘೋಷಣೆಗಳು ಬೇಡ” ಎಂದಿದೆ. ಆರ್ಥಿಕ ಇಲಾಖೆಯೇ ತಿಳಿಸಿರುವಂತೆ, ರಾಜ್ಯದ ಹಣಕಾಸಿನ ಕೊರತೆ 22,000 ಕೋಟಿ ರೂ.ಗಳಿಗೆ ತಲುಪಿದೆ. ಅಂದರೆ ರಾಜ್ಯ ಸರ್ಕಾರವು ತನ್ನ ಎಲ್ಲಾ ಸಾಲ ಸಾಮರ್ಥ್ಯವನ್ನೇ ಮೀರಿದೆ. ರಾಜ್ಯ ಸರ್ಕಾರದ ಮುಂದೆ 34,000 ಕೋಟಿ ರೂ.ಗಳ ಬಿಲ್‌ಗಳು ಬಾಕಿ ಉಳಿದಿವೆ. ಇನ್ನೊಂದೆಡೆ ಅರ್ಥವಿಲ್ಲದ ಆರ್ಥಿಕ ನೀತಿಯಿಂದಾಗಿ ರಾಜ್ಯದ ಸಾಲ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಸರ್ಕಾರಿ ನೌಕರರಿಗೆ ವೇತನ ಪಾವತಿಯಾಗುತ್ತಿಲ್ಲ. ಒಟ್ಟಾರೆಯಾಗಿ ಇಡೀ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೂ ಜನರಿಗೆ ಮಂಕು ಬೂದಿ ಎರಚಲು ಇಲ್ಲಸಲ್ಲದ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದರು.
ಇದೀಗ ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ನಾಡಿನ ಪ್ರತಿಯೊಬ್ಬ ಪ್ರಜೆಗೂ ತಿಳಿದಂತಾಗಿದೆ. ಈಗ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗಾಗಿ ಘೋಷಿಸಿದ ₹32,000 ಕೋಟಿಗೂ ಹೆಚ್ಚು ಅನುದಾನಗಳನ್ನು ಎಲ್ಲಿಂದ ಹೊಂದಿಸಿಕೊಳ್ಳಲಾಗುತ್ತದೆ ಎಂದು ಸರ್ಕಾರವೇ ಹೇಳಬೇಕು. ಸರ್ಕಾರದ ಬೊಕ್ಕಸದಿಂದ ನೇರ ಅನುದಾನ ಸಿಗದೆ, ಘೋಷಿತ ಯೋಜನೆಗಳೆಲ್ಲವೂ ಕೇವಲ ಖಾಸಗಿ-ಸಾರ್ವಜನಿಕ ಸಹಭಾಗಿತ್ವಕ್ಕೆ (ಪಿಪಿಪಿ) ಮಾತ್ರ ಸೀಮಿತಗೊಳ್ಳಲಿದೆಯೇ? ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸರ್ಕಾರ ಬದ್ಧ ಎನ್ನುವ ಹೇಳಿಕೆ ಕೇವಲ ಬಾಯಿ ಮಾತಿಗೆ ಸೀಮಿತವಾಗಬಾರದು. ರಾಜ್ಯದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ತಕ್ಷಣವೇ ಶ್ವೇತ ಪತ್ರ ಹೊರಡಿಸಲಿ ಎಂದು ಶಾಸಕರು ಇದೇ ವೇಳೆ ಆಗ್ರಹಿಸಿದರು.


