ವಿವಾಹಿತ ಮಹಿಳೆ ತನ್ನ ಪ್ರೇಮಿ ಜೊತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!

Prakhara News
2 Min Read

ಮಂಡ್ಯ: ಅನೈತಿಕ ಸಂಬಂಧ ಹಾಗೂ ಕುಟುಂಬದ ಕಲಹಕ್ಕೆ ಬೇಸತ್ತು ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರೇಮಿ ಜೊತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಧೋರಣೆಯ ಘಟನೆ ಮಂಡ್ಯ ಹೊರವಲಯದ ವಿ.ಸಿ. ಫಾರಂ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರು ಮೂಲದ ಸಹನಾ (25) ಹಾಗೂ ರಾಹುಲ್ (23) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಸಹನಾ ಕಳೆದ 8 ವರ್ಷಗಳ ಹಿಂದೆ ವೀರೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ 6 ವರ್ಷದ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗು ಇದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ವೀರೇಶ್, ಕಳೆದ 2-3 ವರ್ಷಗಳಿಂದ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು. ಇವರು ವಾಸವಿದ್ದ ಕಟ್ಟಡದಲ್ಲೇ ರಾಹುಲ್ ಕೂಡ ನೆಲೆಸಿದ್ದನು. ಈ ನಡುವೆ ಸಹನಾ ಮತ್ತು ರಾಹುಲ್ ನಡುವೆ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿದ್ದು, ಇಬ್ಬರೂ ಅನೈತಿಕ ಸಂಬಂಧದಲ್ಲಿದ್ದರು. ಈ ವಿಚಾರ ಪತಿ ವೀರೇಶ್‌ಗೆ ತಿಳಿದು ದಂಪತಿ ನಡುವೆ ಪದೇ ಪದೇ ತೀವ್ರ ಜಗಳ ನಡೆಯುತ್ತಿತ್ತು.

ಸಂಸಾರದಲ್ಲಾದ ಜಗಳದಿಂದ ಬೇಸತ್ತ ವೀರೇಶ್ ಮನೆ ಖಾಲಿ ಮಾಡಿ ಬೇರೆಡೆಗೆ ವಾಸ್ತವ್ಯ ಬದಲಾಯಿಸಿದ್ದನು. ಅಲ್ಲದೆ, ಕುಟುಂಬದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ರಾಹುಲ್ ಸಹವಾಸ ಬಿಡುವಂತೆ ಸಹನಾಗೆ ಹಲವು ಬಾರಿ ಬುದ್ಧಿ ಹೇಳಲಾಗಿತ್ತು. ಆದಾಗ್ಯೂ ಸಹನಾ ತನ್ನ ನಡವಳಿಕೆಯನ್ನು ತಿದ್ದುಕೊಂಡಿರಲಿಲ್ಲ. ಕಳೆದ ಸೋಮವಾರ ಮತ್ತೆ ಗಂಡ-ಹೆಂಡತಿ ನಡುವೆ ಇದೇ ವಿಚಾರವಾಗಿ ಜಗಳ ನಡೆದಿದ್ದು, “ನಾನು ರಾಹುಲ್ ಜೊತೆಯೇ ಬಾಳುತ್ತೇನೆ” ಎಂದು ಸಹನಾ ಪಟ್ಟುವಿಡಿದಿದ್ದಳು. ಇದರಿಂದ ಕೆರಳಿದ ವೀರೇಶ್ “ನಿಮ್ಮಿಬ್ಬರನ್ನೂ ಜೀವಂತವಾಗಿ ಬಾಳಲು ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದನು. ಇದರಿಂದ ಕೋಪಗೊಂಡ ಸಹನಾ ಮಂಗಳವಾರ ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದಳು.

ಗುರುವಾರ ರಾಹುಲ್ ಗುನ್ನಾಯಕನಹಳ್ಳಿಗೆ ಆಗಮಿಸಿ ಸಹನಾಳನ್ನು ಭೇಟಿಯಾಗಿದ್ದನು. ಇಬ್ಬರೂ ಸೇರಿ ಪತಿ ವೀರೇಶ್ ವಿರುದ್ಧ ಪೊಲೀಸ್ ದೂರು ನೀಡಲು ನಿರ್ಧರಿಸಿದ್ದರೆನ್ನಲಾಗಿದೆ. ಆದರೆ, ವೀರೇಶ್ ತಮ್ಮನ್ನು ಜೀವಿಸಲು ಬಿಡುವುದಿಲ್ಲ ಎಂಬ ಭಯ ಹಾಗೂ ಮನನೊಂದ ಇಬ್ಬರೂ ಕೊನೆಗೆ ಜೀವನ ಮುಗಿಸಲು ತೀರ್ಮಾನಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಇಬ್ಬರೂ ವಿ.ಸಿ. ಫಾರಂ ರೈಲ್ವೆ ಗೇಟ್ ಬಳಿ ಸಾಗುತ್ತಿದ್ದ ರೈಲಿಗೆ ತಲೆಕೊಟ್ಟು ದುರಂತವಾಗಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ರೈಲ್ವೆ ಪೊಲೀಸರು ಮೃತದೇಹಗಳನ್ನು ಮಂಡ್ಯದ ಮಿಮ್ಸ್ (MIMS) ಶವಾಗಾರಕ್ಕೆ ರವಾನಿಸಿ, ವಾರಸುದಾರರಿಗೆ ಮಾಹಿತಿ ನೀಡಿದ್ದಾರೆ.

Share This Article
Leave a Comment