ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಾಗ್ದಾಳಿ

Prakhara News
2 Min Read

ಮಂಗಳೂರು : ದೇಶದಲ್ಲೇ ಪ್ರಗತಿಪರ ಹಾಗೂ ಆರ್ಥಿಕ ಶಿಸ್ತಿಗೆ ಹೆಸರಾಗಿದ್ದ ಕರ್ನಾಟಕವನ್ನು ಸಾಲದ ಭಾರಕ್ಕೆ ತಳ್ಳಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಆರ್ಥಿಕ ಶಿಸ್ತಿಗೆ ಹೆಸರಾಗಿತ್ತು. ಆದರೆ ಇದೀಗ ರಾಜ್ಯ ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವುದನ್ನು ಸಿಎಜಿ ವರದಿಯೇ ಸ್ಪಷ್ಟಪಡಿಸಿದೆ ಎಂದು ಹೇಳಿದರು. “ರಾಜ್ಯದ ಪ್ರಜೆಗಳನ್ನು ಸಾಲದ ಸುಳಿಯಲ್ಲಿ ಸಿಕ್ಕಿಸುವುದೇ ಸರ್ಕಾರದ ಸಾಧನೆಯಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲೂ ನಿರ್ಲಕ್ಷ್ಯ ತೋರಲಾಗುತ್ತಿದೆ” ಎಂದು ಆರೋಪಿಸಿದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ 6.38 ಲಕ್ಷ ಮನೆಗಳಲ್ಲಿ ಸುಮಾರು 2.5 ಲಕ್ಷ ಮನೆಗಳು ಇನ್ನೂ ಅಪೂರ್ಣವಾಗಿವೆ ಎಂದರು.

ಕ್ಷೀರಧಾರೆ ಯೋಜನೆಯಡಿ ಕಳೆದ ಒಂಬತ್ತು ತಿಂಗಳಿಂದ ₹800 ಕೋಟಿ ಸಬ್ಸಿಡಿ ಹಣವನ್ನು ಹೈನುಗಾರರಿಗೆ ಬಿಡುಗಡೆ ಮಾಡಿಲ್ಲ. ₹15 ಸಾವಿರ ಕೋಟಿ ಕಾರ್ಪಸ್ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದ್ದು, ಅದರ ಕುರಿತು ಸರ್ಕಾರ ಸ್ಪಷ್ಟನೆ ನೀಡುತ್ತಿಲ್ಲ ಎಂದು ದೂರಿದರು. “ಸಿದ್ದರಾಮಯ್ಯ ಅವರು ದೀರ್ಘಕಾಲ ರಾಜಕೀಯ ಅನುಭವ ಹೊಂದಿದ್ದರೂ ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ಈ ರೀತಿಯ ಆರ್ಥಿಕ ನಿರ್ವಹಣೆ ನಡೆಸುತ್ತಿರುವುದು ಅರ್ಥವಾಗುತ್ತಿಲ್ಲ” ಎಂದು ಟೀಕಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಹೇಳಿದ ಅವರು, “ಆರೋಗ್ಯ ಇಲಾಖೆ ಸಿಎಸ್‌ಆರ್ ನಿಧಿಗಳ ಮೇಲೆ ಅವಲಂಬಿತವಾಗಿದೆ. ಸಿಬ್ಬಂದಿಗೆ ವೇತನ ನೀಡುವಲ್ಲಿಯೂ ಸಮಸ್ಯೆ ಇದೆ. ಹೊಸ ನೇಮಕಾತಿಗಳೂ ನಡೆಯುತ್ತಿಲ್ಲ” ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಕಾಲನಿ ನಿಧಿ ಪರಿಪಾಠವು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ ಅವರು, ಈ ಎಲ್ಲ ವಿಷಯಗಳನ್ನು ಜನರ ಮುಂದಿಟ್ಟು ಬಿಜೆಪಿ ಜನಾಭಿಪ್ರಾಯ ರೂಪಿಸಲಿದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಮಾತನಾಡಿದ ಅವರು, “ಪ್ರತಿಯೊಂದಕ್ಕೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುವ ರಾಜಕೀಯ ನಾನು ಮಾಡುವುದಿಲ್ಲ. ಪ್ರಿಯಾಂಕ್ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ  ಅವರ ಸಾಧನೆ ಅವರ ಕ್ಷೇತ್ರಗಳ ಅಭಿವೃದ್ಧಿಯಿಂದಲೇ ಗೊತ್ತಾಗುತ್ತದೆ” ಎಂದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ಬೆಲೆ ಏರಿಕೆಯಾಗಿದೆ. ಇದು ಸವಾಲಿನ ಪರಿಸ್ಥಿತಿಯಾದರೂ ಅದನ್ನು ಸಮತೋಲನಗೊಳಿಸುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಯೋಜನೆಗಳ ವಿರುದ್ಧ ನಾವು ಇಲ್ಲ. ಆದರೆ ತಪ್ಪಾದ ಆರ್ಥಿಕ ನಿರ್ವಹಣೆಯಿಂದ ರಾಜ್ಯ ಇಂದು ಡೋಲಾಯಮಾನ ಪರಿಸ್ಥಿತಿಗೆ ತಲುಪಿದೆ” ಎಂದರು.

Share This Article
Leave a Comment