ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ತಮಗೆ ವಹಿಸಲಾದ ಖಾತೆಯ ಬಗ್ಗೆ ಅಸಮಾಧಾನಗೊಂಡಿರುವ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ.


ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. “ನನಗೆ ಬೆಂಗಳೂರು ಉಸ್ತುವಾರಿ ಖಾತೆ ನೀಡುವುದಾಗಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದರು. ಆದರೆ ನೀಡಿಲ್ಲ.. ನಾನು ಆತ್ಮ ಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಯಾರ ಮೇಲೂ ಬೇಸರವಿಲ್ಲ. ಯಾರು ಕರೆದು ಮಾತನಾಡಿದರೂ ರಾಜೀನಾಮೆ ವಾಪಾಸ್ ಪಡೆಯುವುದಿಲ್ಲ’ ಎಂದು ತಮ್ಮ ಅಭಿಪ್ರಾಯ ಹೇಳಿದರು.

“ನಾನು ಹೋಗಿ ರಾಜೀನಾಮೆ ನೀಡುವುದಿಲ್ಲ ಪ್ರಿನ್ಸಿಪಾಲ್ ಸೆಕ್ರೆಟರಿ ತುಷಾರ್ಗಿರಿನಾಥ್ ಅವರಿಗೆ ಮಾಜಿ ಮೇಯರ್ ಮಂಜುನಾಥ್ ಅವರು ಹೋಗಿ ರಾಜೀನಾಮೆ ಪತ್ರ ನೀಡಲಿದ್ದಾರೆ” ಎಂದು ಆಕ್ರೋಶ ಹೊರ ಹಾಕಿದರು.
ನಾನು ರಾಜೀನಾಮೆ ನೀಡಲು ಕಾರಣವೇನು ಎನ್ನುವುದು ಜನರಿಗೆ ಗೊತ್ತಾಗಬೇಕು. ಮತ್ತೆ ನನ್ನ ನಿರೀಕ್ಷೆಯ ಖಾತೆ ನೀಡಿದರೂ ರಾಜೀನಾಮೆ ವಾಪಾಸ್ ಪಡೆಯುವುದಿಲ್ಲ. ಕಾಂಗ್ರೆಸ್ ಶಾಸಕನಾಗಿ ಮುಂದುವರಿಯುತ್ತೇನೆ ಎಂದು ನಿಲುವಿಗೆ ದೃಢವಾಗಿ ನಿಲ್ಲುತ್ತೇನೆ ಎಂದರು.


ರಾಮಲಿಂಗಾ ರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಅವರು ನಿರೀಕ್ಷೆ ಇಟ್ಟಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣ ಭೈರೇಗೌಡ ಅವರಿಗೆ ನೀಡಲಾಗಿರುವುದು ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.


