ಕಾರ್ಕಳ: ದೇವಸ್ಥಾನದ ಚೆಕ್‌ಗೆ ನಕಲಿ ಸಹಿ ಪ್ರಕರಣ; ಡಾಟಾ ಎಂಟ್ರಿ ಆಪರೇಟರ್‌ನ ಬಂಧನ

Prakhara News
1 Min Read

ಕಾರ್ಕಳ: ಕಾರ್ಕಳ ತಾಲೂಕು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನಿಸಿದ ಆರೋಪದಡಿ ಡಾಟಾ ಎಂಟ್ರಿ ಆಪರೇಟರ್‌ನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮರ್ಫೆ ಗ್ರಾಮದ ಎಳ್ಳೆಹೊಳೆ ಹಂಚಿಕಟ್ಟೆಯ ನಿವಾಸಿ ಅಕ್ಷಯ ದೇವಾಡಿಗ (29) ಎಂದು ತಿಳಿದು ಬಂದಿದೆ.

2022ರ ಡಿಸೆಂಬರ್ 1ರಿಂದ 2026ರ ಮೇ 7ರವರೆಗೆ ಆರೋಪಿಯು ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಡುವ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇಲಾಖೆಯ ಲೆಕ್ಕ ಪರಿಶೋಧನೆ ವೇಳೆ ಕರ್ತವ್ಯ ಲೋಪ ಹಾಗೂ ಅಕ್ರಮಗಳು ಬೆಳಕಿಗೆ ಬಂದಿದ್ದು, ಈ ಕುರಿತು ವಿವರಣೆ ಕೇಳಿದಾಗ ಯಾವುದೇ ಮಾಹಿತಿ ನೀಡದೆ ರಾಜೀನಾಮೆ ನೀಡಿ ಕೆಲಸಕ್ಕೆ ಗೈರಾಗಿದ್ದ ಎಂದು ಹೇಳಲಾಗಿದೆ.

ಬಳಿಕ ದೇವಸ್ಥಾನದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಚಾಲ್ತಿ ಖಾತೆಗೆ ಸಂಬಂಧಿಸಿದ ಆರು ಚೆಕ್‌ಗಳನ್ನು ಆತ ಜೂನ್ 24ರಂದು ನಗದೀಕರಣಕ್ಕೆ ಸಲ್ಲಿಸಿದ್ದ. ಇದರಿಂದ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗೆ ಅನುಮಾನ ಬಂದು ಪರಿಶೀಲಿಸಿದಾಗ, ದೇವಸ್ಥಾನ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಾರದೆ ಅವರ ಸಹಿಯನ್ನು ನಕಲಿ ಮಾಡಿ ಚೆಕ್ ನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a Comment